ಬೇಲೂರು ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾಗಿದ್ದ ಫಲಾನುಭವಿಗಳಿಗೆ ವಿವಿಧ ಪರಿಕರ ಹಾಗೂ ಮಂಜೂರಾತಿ ಪತ್ರವನ್ನು ಶಾಸಕ ಎಚ್.ಕೆ.ಸುರೇಶ್ ವಿತರಿಸಿದರು. ರಾಜು, ರೇಣುಕುಮಾರ್, ರಂಗನಾಥ್, ಪರ್ವತಯ್ಯ, ಮಲ್ಲಿಕಾರ್ಜುನ್ ಇದ್ದರು. 
ಹಾಸನ

ನಿರ್ಗತಿಕರಿಗೆ ಸರ್ಕಾರಿ ಸೌಲಭ್ಯ ತಲುಪಿಸುವುದೇ ನಮ್ಮ ಮೊದಲ ಆದ್ಯತೆ

ಬೇಲೂರು: ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆಯಾಗಿದ್ದ ತಾಲೂಕಿನ 25 ಫಲಾನುಭವಿಗಳಿಗೆ ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಚ್.ಕೆ.ಸುರೇಶ್ ಸೋಮವಾರ ಮೋಟಾರ್ ಪಂಪ್‌ಗಳು ಹಾಗೂ ಯೋಜನೆಯ ಮಂಜೂರಾತಿ ಪತ್ರಗಳನ್ನು ವಿತರಿಸಿದರು.
ಬಳಿಕ ಮಾತನಾಡಿದ ಶಾಸಕರ, ಆರ್ಥಿಕವಾಗಿ ಹಿಂದುಳಿದ ಬಡವರು ಮತ್ತು ನಿಜವಾಗಿಯೂ ನೆರವಿನ ಅಗತ್ಯವಿರುವ ನಿರ್ಗತಿಕರಿಗೆ ಯಾವುದೇ ಒತ್ತಡಕ್ಕೆ ಮಣಿಯದೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಅಲ್ಲದೆ ಆಯ್ಕೆಯಾದ ಎಲ್ಲ 25 ಜನ ಫಲಾನುಭವಿಗಳೂ ಅರ್ಹರಾಗಿದ್ದು, ಅವರಿಗೆ ಯೋಜನೆಯ ಸೌಲಭ್ಯಗಳನ್ನು ಪಾರದರ್ಶಕವಾಗಿ ನೀಡಲಾಗುತ್ತಿದೆ ಎಂದರು.
ಕ್ಷೇತ್ರದಲ್ಲಿ ಭ್ರಷ್ಟಾಚಾರಮುಕ್ತ ಆಡಳಿತಕ್ಕೆ ಆದ್ಯತೆ ನೀಡಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುವಂತ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯಲ್ಲಿ ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯಿಂದ ಅರ್ಹ ಫಲಾನುಭವಿಗಳ ಆಯ್ಕೆ ಸುಲಭವಾಗಿದೆ. ಯಾವುದೇ ಕಮಿಷನ್ ಅಥವಾ ಮಧ್ಯವರ್ತಿಗಳ ಹಾವಳಿ ಇಲ್ಲದೆ ಕೊಳವೆ ಬಾವಿ, ಮೋಟಾರ್ ಪಂಪ್ ಹಾಗೂ ವಿದ್ಯುತ್ ಸಂಪರ್ಕವನ್ನು ನೇರವಾಗಿ ಒದಗಿಸಲಾಗುತ್ತಿದೆ. ಈ ಯೋಜನೆ ಸಂಪೂರ್ಣ ಕಂಪ್ಯೂಟರೀಕರಣವಾಗಿದ್ದು, ಬೋರ್‌ವೆಲ್ ಕಾಮಗಾರಿ ವೆಚ್ಚ ಸೇರಿದಂತೆ ಸಂಪೂರ್ಣ ಮಾಹಿತಿ ಫಲಾನುಭವಿಗಳ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ತಲುಪುತ್ತದೆ ಎಂದರು.
ಯೋಜನೆಯಡಿ ಸೆಸ್ಕ್ ಇಲಾಖೆಗೆ ಡೆಪಾಸಿಟ್‌ಗೆ 75 ಸಾವಿರ ರೂ, ಫಲಾನುಭವಿಗಳ ಇಚ್ಛೆಯಂತೆ 50 ಸಾವಿರ ರೂ. ಸಾಲ ಸೌಲಭ್ಯ ಹಾಗೂ ಬೋರ್‌ವೆಲ್ ಮತ್ತು ಕೇಸಿಂಗ್ ಪೈಪ್ ವೆಚ್ಚಕ್ಕಾಗಿ ಉಳಿದ ಅನುದಾನವನ್ನು ಬಳಸಲಾಗುತ್ತದೆ. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ 60 ಫಲಾನುಭವಿಗಳಿಗೂ ವಿಶೇಷ ಕಾರ್ಯಕ್ರಮದ ಮೂಲಕ ಪಂಪ್ ಮೋಟಾರ್ ಹಾಗೂ ಅಗತ್ಯ ಪರಿಕರಗಳನ್ನು ವಿತರಿಸಲಾಗುವುದು. ರೈತರ ಬೋರ್‌ವೆಲ್‌ಗಳಲ್ಲಿ ಸಮರ್ಪಕವಾಗಿ ನೀರು ದೊರೆತು ಎಲ್ಲರ ಬದುಕು ಸಮೃದ್ಧಿಯಾಗಲಿ ಎಂದು ಹಾರೈಸಿದರು.
ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕ್ಷೇತ್ರ ವಿಸ್ತರಣಾಧಿಕಾರಿ ರಾಜು, ಮುಖಂಡರಾದ ರೇಣುಕುಮಾರ್, ರಂಗನಾಥ್, ಪರ್ವತಯ್ಯ, ಮಲ್ಲಿಕಾರ್ಜುನ್, ಶೇಖರಯ್ಯ ಸೇರಿದಂತೆ ಫಲಾನುಭವಿಗಳಿದ್ದರು.