ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಕೆಂಕೆರೆ ಸರ್ಕಾರಿ ಶಾಲೆಯ ವಿಲೀನವನ್ನು ವಿರೋಧಿಸಿ ಪ್ರತಿಭಟನೆ ಮಾಡಲಾಯಿತು. ಸುಭಾಷ್ ಬೆಟ್ಟದಕೊಪ್ಪ, ಸುಷ್ಮಾ, ಅಭಿಷೇಕ್ ಇತರರು ಇದ್ದರು.
ಅರಸೀಕೆರೆ ಗ್ರಾಮಾಂತರ: ಇಲ್ಲಿನ ಕೆಂಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಚೆಂದೆನಹಳ್ಳಿ ಗೇಟ್ ಬಳಿಯ ಕೆಪಿಎಸ್ ಶಾಲೆಯೊಂದಿಗೆ ವಿಲೀನಗೊಳಿಸಲು ಹೊರಟಿರುವ ಸರ್ಕಾರದ ನಡೆಯನ್ನು ಖಂಡಿಸಿ ಗ್ರಾಮದ ವಿದ್ಯಾರ್ಥಿಗಳು, ಪಾಲಕರು ಗುರುವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಎಐಡಿಎಸ್‌ಒ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ, ಕೆಂಕೆರೆ ಗ್ರಾಮದಲ್ಲಿ 700 ಕುಟುಂಬಗಳಿದ್ದು, ಇಲ್ಲಿನ ಮಕ್ಕಳು ಸರ್ಕಾರಿ ಶಾಲೆಯನ್ನೇ ಅವಲಂಬಿಸಿದ್ದಾರೆ. ಇದೀಗ ಸರ್ಕಾರ 100 ಕುಟುಂಬಗಳು ಇರುವ ಚೆಂದೆನಹಳ್ಳಿ ಗೇಟ್‌ನಲ್ಲಿ ಕೆಪಿಎಸ್ ಶಾಲೆ ನಿರ್ಮಿಸಿ ಕೆಂಕೆರೆ ಶಾಲೆಯನ್ನು ವಿಲೀನಗೊಳಿಸಲು ಪಟ್ಟಿ ತಯಾರಿಸಿದೆ. ಇದು ಸರಿಯಾದ ನಡೆಯಲ್ಲ. ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಹಾಗೂ ಯುವಕರು ಸೇರಿ ದೇಣಿಗೆ ಸಂಗ್ರಹಿಸಿ ಶಾಲೆಗೆ ಹೊಸ ರೂಪ ನೀಡಿದ್ದಾರೆ. ಇದರಿಂದಾಗಿ ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದೀಗ ವಿಲೀನಕ್ಕೆ ಮುಂದಾಗಿರುವುದು ಸೂಕ್ತವಲ್ಲ ಎಂದು ತಿಳಿಸಿದರು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಸುಷ್ಮಾ, ಜಿಲ್ಲಾ ಉಪಾಧ್ಯ ಕ್ಷ ಅಭಿಷೇಕ್ ಹಾಗೂ ಹಿರಿಯ ವಿದ್ಯಾರ್ಥಿಗಳ ಸಂಘದ ಪ್ರಮುಖರು, ಗ್ರಾಮಸ್ಥರು, ಪಾಲಕರು ಇದ್ದರು.