ಉತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿರುವ ಘಟನೆ ವಿರೋಧಿಸಿ ಬೇಲೂರಿನ ಬಸವೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಎಂ.ಜೆ.ನಿಶಾಂತ್, ಎಂ.ಆರ್.ವೆಂಕಟೇಶ್, ನಾಗೇಶ್ ಇತರರಿದ್ದರು.
- ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ
- ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ
ಉತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿರುವ ಘಟನೆ ವಿರೋಧಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಕಚೇರಿಯಿಂದ ಪಟ್ಣಣದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಸಿ ರಸ್ತೆ ಸಂಚಾರ ತಡೆ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.
ಮಾಜಿ ಸಚಿವ ಬಿ.ಶಿವರಾಂ ಮಾತನಾಡಿ, ಡಾ.ಅಂಬೇಡ್ಕರ್ ಅಸ್ಪೃಶ್ಯತೆಯ ನೋವು ಅನುಭವಿಸಿದರು. ಆದರೆ, ಇದು ಮುಂದುವರಿಯಬಾರದು ಎಂದು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗಿ ಸಂವಿಧಾನದಲ್ಲಿ ಅಸ್ಪೃಶ್ಯತೆ, ಶೋಷಣೆ ನಿಲ್ಲಿಸುವಂತಹ ಕಾನೂನು ತಂದರೂ ದೇಶದಲ್ಲಿ ಆಸ್ಪಶ್ಯತೆ ಈಗಲೂ ತಾಂಡವವಾಡುತ್ತಿದೆ ಎಂಬುದಕ್ಕೆ ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಣ ಮಾಡಿಸುರುವುದೇ ಸಾಕ್ಷಿಯಾಗಿದೆ. ಇಂತಹ ಘಟನೆಗೆ ಕಾರಣರಾದವರ ವಿರುದ್ಧ ಕೇಂದ್ರ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಳೇಬೀಡು-ಬೇಲೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಯ್ಯದ್ ತೌಫೀಕ್ ಮಾತನಾಡಿ, ಭಾರತ ದೇಶ ಜಾತ್ಯತೀತ ದೇಶವಾಗಿದೆ ಒಂದು ಜಾತಿಗೆ ಸೀಮಿತವಾಗಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸಿರುವುದು ದೇಶದ ಜನತೆಗೆ ಮಾಡಿದ ಅವಮಾನ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು. ಖರ್ಗೆ ಅವರಲ್ಲಿ ಕ್ಷಮೆ ಕೇಳುವಂತೆ ಮಾಡಬೇಕು. ಇಲ್ಲದಿದ್ದಲ್ಲಿ ಹೋರಾಟ ಉಗ್ರ ರೂಪ ಪಡೆಯಲಿದೆ ಎಂದರು.
ಪುರಸಭೆ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ, ಭಾರತ ದೇಶವನ್ನು ಹಿಂದೂ ರಾಷಟ್ರೆವನ್ನಾಗಿ ಮಾಡುತ್ತೇವೆ ಎಂದು ಹೇಳುತ್ತಿರುವ ಆರ್‌ಎಸ್‌ಎಸ್, ಬಜರಂಗದಳ, ಬಿಜೆಪಿ ಪಕ್ಷದವರೇ, ಭಾರತ ದೇಶ ಒಂದು ಜಾತ್ಯತೀತ ರಾಷಟ್ರೆವೆಂಬುದನ್ನು ಮರೆತಿದ್ದಾರೆ. ದೇಶದಲ್ಲಿ ಸಾವಿರಾರು ಜಾತಿ ಧರ್ಮದ ಜನರಿದ್ದಾರೆ. ಹಿಂದುಳಿದವರನ್ನು ಅಲ್ಪರಂತೆ ನೋಡುವ ಕೆಲಸವನ್ನು ಬಿಡಬೇಕು. ಅಂಬೇಡ್ಕರ್ ಹುಟ್ಟಿದ ನಾಡಿನಲ್ಲಿ ಅವರ ತತ್ವ ಸಿದ್ಧಾಂತ ಮರೆತಿದ್ದಾರೆ. ಖರ್ಗೆ ಅವರಿಗೆ ಅವಮಾನಿಸಿದವರನ್ನು ಶಿಕ್ಷಿಸಬೇಕು ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್.ವೆಂಕಟೇಶ್, ಜಿಪಂ ಮಾಜಿ ಸದಸ್ಯ ನಾಗೇಶ್, ಪುರಸಭೆ ಅಧ್ಯಕ್ಷ ಅಕ್ರಮ್ ಷರೀಫ್, ಬಿಕ್ಕೋಡ್ ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್, ತಾಲೂಕು ಕೆಡಿಪಿ ಸದಸ್ಯ ಚೇತನ್‌ಗೌಡ, ಪುರಸಭೆ ಸದಸ್ಯ ಜಮಾಲ್, ಮುಖಂಡರಾದ ರಂಗನಾಥ್, ಇಕ್ಬಾಲ್, ಆಸೀಫ್, ಚಂದ್ರಶೇಖರ್ ಸೇರಿದಂತೆ ಇತರರಿದ್ದರು.