ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಯೋಗಿ ನಾರೇಯಣ ಯತೀಂದ್ರರ ( ಕೈವಾರ ತಾತಯ್ಯ ) ಜಯಂತಿಯನ್ನು ಗಣ್ಯರು ಉದ್ಘಾಟಿಸಿದರು. ಮಲ್ಲೇಶ್ ಗೌಡ, ರಮೇಶ್, ಎನ್.ಎಲ್ ಚನ್ನೇಗೌಡ, ಎಚ್.ಪಿ.ತಾರಾನಾಥ್ ಇದ್ದರು. 
ಹಾಸನ

ತತ್ವಜ್ಞಾನಿಗಳಿಗೆ ಮಾತ್ರ ಜಗತ್ತಿನ ಸತ್ಯದ ಅರಿವು

ಪ್ರಮುಖ ಮುಖ್ಯಾಂಶಗಳು

  • ತತ್ವಜ್ಞಾನಿಗಳಿಗೆ ಮಾತ್ರ ಜಗತ್ತಿನ ಸತ್ಯದ ಅರಿವು
  • ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲೇಶ್ ಗೌಡ ಅಭಿಪ್ರಾಯ
ಹಾಸನ: ಎಲ್ಲ ವಿದ್ಯಾವಂತರು ವಿವೇಕಿಗಳಲ್ಲ, ಎಲ್ಲ ಜ್ಞಾನಿಗಳು ವಿವೇಕಿಗಳಲ್ಲ. ಬುದ್ಧಿವಂತರೆಲ್ಲ ಜ್ಞಾನಿಗಳಲ್ಲ, ಜ್ಞಾನಿಗಳೆಲ್ಲ ವಿವೇಕರಲ್ಲ. ಯಾರು ವಿವೇಕಿಯೋ ಅವನಿಗೆ ಮಾತ್ರ ಸತ್ಯಗಳು ಗೋಚರವಾಗುತ್ತದೆ. ಅಂತಹ ಪಾತ್ರಕ್ಕೆ ಹೆಸರಾದವರು ಕೈವಾರ ತಾತಯ್ಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲೇಶ್ ಗೌಡ ತಿಳಿಸಿದರು.
ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಯೋಗಿ ನಾರೇಯಣ ಯತೀಂದ್ರರ ( ಕೈವಾರ ತಾತಯ್ಯ) ಜಯಂತಿ ಉದ್ಘಾಟಸಿ ಮಾತನಾಡಿದರು. ಜಗತ್ತಿನ ಬಹುತೇಕ ಸಾಧಕರು ನೋವು ಅನುಭವಿಸಿದವರು. ಅಂತಹ ತತ್ವಜ್ಞಾನಿಗಳಿಗೆ ಮಾತ್ರ ಜಗತ್ತಿನ ಸತ್ಯಗಳನ್ನು ತಿಳಿಯಲು ಸಾಧ್ಯ. ಸುಖದಲ್ಲಿ ಇದ್ದವರಿಗೆ ಜಗತ್ತಿನ ಸತ್ಯವನ್ನು ತಿಳಿಯಲು ಸಾಧ್ಯವಿಲ್ಲ ಎಂದರು.
ದಕ್ಷಿಣ ಭಾರತವು ತ್ರೇತಾಯುಗ ಮತ್ತು ದ್ವಾಪರ ಯುಗದಲ್ಲಿ ಜಗತ್ತಿನ ಮನುಷ್ಯರು ಬದುಕಿಗೆ ಬೇಕಾದಂತಹ ಕಟು ಸತ್ಯವನ್ನು ಪ್ರತಿಪಾದನೆ ಮಾಡುವಲ್ಲಿ ಅನೇಕ ಚಿಂತಕರು, ಮೇಧಾವಿಗಳು, ದಾರ್ಶನಿಕರು, ಕನ್ನಡ ನಾಡಿನ ನೆಲೆಯಲ್ಲಿ ಶ್ರೇಷ್ಠ ಕಾವ್ಯ, ಕವನ, ತತ್ವಪದ, ವಚನ, ಇತ್ಯಾದಿಗಳನ್ನು ರೂಪಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಸಾಹಿತಿ ಎನ್.ಎಲ್ ಚನ್ನೇಗೌಡ ಮಾತನಾಡಿ, ಕೈವಾರ ತಾತಯ್ಯನವರು ಸಂಸಾರದ ಹೊರೆಯನ್ನು ತೊರೆದು ಸನ್ಯಾಸಿ ಪಟ್ಟವನ್ನು ಸ್ವೀಕರಿಸಿ ಸಮಾಜಕ್ಕೆ ಅನೇಕ ಆಧ್ಯಾತ್ಮಿಕ ತತ್ವಪದಗಳನ್ನು ನೀಡಿದರು. ಸುಮಾರು 20 ರಿಂದ 25 ತತ್ವಗಳನ್ನು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಕಚೇರಿ ಸಹಾಯಕ ರಮೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಪಿ.ತಾರಾನಾಥ್ ಇದ್ದರು.