ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದ ಮೈ ಸ್ಕೂಲ್ ಶಾಲೆಯಲ್ಲಿ ಗುರು ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಗುರು ಹಿರಿಯರ ಪಾದಪೂಜೆ ಮಾಡಿ ಆಶಿರ್ವಾದ ಪಡೆದರು. 
ಹಾಸನ

ಗುರುಗಳಿಗೆ ಸದಾ ಗೌರವ ಸಲ್ಲಿಸಬೇಕು

ಎಂ.ರವಿ
ಬೇಲೂರು: ಮನುಷ್ಯನಲ್ಲಿರುವ ಅಜ್ಞಾನವೆಂಬ ಅಂಧಕಾರವನ್ನು ದೂರ ಮಾಡಿ ಜ್ಞಾನ, ಸಂಸ್ಕಾರ ಹಾಗೂ ಮೌಲ್ಯಯುತ ಜೀವನದ ಮಾರ್ಗದರ್ಶನ ನೀಡುವ ಗುರುಗಳಿಗೆ ಸದಾ ಗೌರವ ಸಲ್ಲಿಸಬೇಕು ಎಂದು ಕಡೇಗರ್ಜೆ ಮೈ ಸ್ಕೂಲ್ ಶಾಲೆಯ ಸಂಸ್ಕೃತ ಶಿಕ್ಷಕ ವಿನಯ್ ಭಟ್ ಹೇಳಿದರು.
ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಕಡೇಗರ್ಜೆ ಗ್ರಾಮದ ಮೈ ಸ್ಕೂಲ್ ಶಾಲೆಯಲ್ಲಿ ಗುರು ಪೂರ್ಣಿಮೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಗುರುಪೂಜೆ ಸಲ್ಲಿಸಿ ಕೃತಜ್ಞತೆ ವ್ಯಕ್ತಪಡಿಸಿದ ನಂತರ ಮಾತನಾಡಿದ ಅವರು, ಗುರು ಪೂರ್ಣಿಮೆಯ ಮಹತ್ವವನ್ನು ಎಲ್ಲರೂ ಅರಿತು ಹಿಂದೂ ಧರ್ಮದ ಪವಿತ್ರ ಗ್ರಂಥಗಳಾದ ಚತುರ್ವೇದಗಳನ್ನು ವ್ಯವಸ್ಥಿತವಾಗಿ ವಿಭಜಿಸಿದ ವೇದವ್ಯಾಸ ಮಹರ್ಷಿಗಳ ಜನ್ಮದಿನವೇ ಗುರು ಪೂರ್ಣಿಮೆಯಾಗಿ ಆಚರಿಸಲಾಗುತ್ತದೆ ಎಂದರು.
ಶ್ರೀರಾಮನು ಮಹರ್ಷಿ ವಿಶ್ವಾಮಿತ್ರರಿಂದ ಶಿಕ್ಷಣ ಹಾಗೂ ಶಸ್ತ್ರ ವಿದ್ಯೆಯನ್ನು ಪಡೆದ ದಿನದ ಸ್ಮರಣೆಯೂ ಈ ಆಚರಣೆಯೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ಗುರುಗಳಿಗೆ ಗುರು ಪೂರ್ಣಿಮೆಯಂದು ಗೌರವದಿಂದ ವಿದ್ಯಾರ್ಥಿಗಳು ಗುರುಗಳ ಆಶೀರ್ವಾದ ಪಡೆದು, ಅವರ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವ ಸಂಕಲ್ಪ ಮಾಡಬೇಕು ಎಂದರು. ಕಡೇಗರ್ಜೆ ಗ್ರಾಮದ ಮೈ ಸ್ಕೂಲ್ ಶಾಲೆ ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.