ಸಕಲೇಶಪುರ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಇಂಜನಿಯರ್‌ಗಳ ಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿದರು.  
ಹಾಸನ

ಒಳಚರಂಡಿ ನಿರ್ಮಾಣಕ್ಕೆ ಅಧಿಕಾರಿಗಳು ಒತ್ತು ನೀಡಿ

ಎಂ.ರವಿ
ಸಕಲೇಶಪುರ: ರಸ್ತೆಗಳಲ್ಲಿ ತೋಳ್‌ಚರಂಡಿ ನಿರ್ಮಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
ಶುಕ್ರವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ವಿಧಾನಸಭಾ ಕ್ಷೇತ್ರದ ಲೋಕಪಯೋಗಿ, ಜಿಲ್ಲಾ ಪಂಚಾಯಿತಿ, ಎತ್ತಿನಹೊಳೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಅವರೊಂದಿಗೆ ಸಭೆ ನಡೆಸಿ ಮಾತನಾಡಿ, ಹೆಚ್ಚು ಮಳೆ ಬೀಳುವ ಮಲೆನಾಡಿನಲ್ಲಿ ರಸ್ತೆಗೆ ಬೀಳುವ ಮಳೆ ನೀರು ಸರಾಗವಾಗಿ ಚರಂಡಿಗೆ ಹರಿದು ಹೋಗಲು ತೋಳಚರಂಡಿ ನಿರ್ಮಾಣ ಅತ್ಯಗತ್ಯ. ಹೊಸ ರಸ್ತೆಗಳು ತೋಳ್‌ಚರಂಡಿ ಇಲ್ಲದೆ ವರ್ಷದಲ್ಲೇ ಹೊಂಡಗಳು ನಿರ್ಮಾಣವಾಗುತ್ತಿವೆ. ಆದ್ದರಿಂದ ಅನ್ಯ ಕೆಲಸಗಳನ್ನು ಬದಿಗೊತ್ತಿ ಚರಂಡಿ ನಿರ್ಮಾಣಕ್ಕೆ ಅದ್ಯತೆ ನೀಡಬೇಕು ಎಂದರು.
ಮಲೆನಾಡಿನಲ್ಲಿ ರಸ್ತೆಗಳ ಸಂರಕ್ಷಣೆಗಾಗಿ ಸರ್ಕಾರ ಮಳೆಗಾಲಕ್ಕೂ ಮುನ್ನ ಹಾಗೂ ಮಳೆಗಾಲದ ನಂತರ ಅನುದಾನ ನೀಡಬೇಕು. ಮಳೆಗಾಲದಲ್ಲಿ ಕುಸಿಯ ಬಹುದಾದ ಭೂಪ್ರದೇಶಗಳನ್ನು ಗುರುತಿಸಿ ತಡೆಗೋಡೆ ನಿರ್ಮಿಸಲು ಡಿಪಿಆರ್ ರಚಿಸವಂತೆ, ಅಗತ್ಯ ಸೇತುವೆಗಳ ನಿರ್ಮಾಣ ಪಟ್ಟಿ ಸಿದ್ಧಪಡಿಸಬೇಕು. ಅಲ್ಲದೆ ತೀವ್ರ ದುಸ್ಥಿತಿಗೀಡಾಗಿರುವ ರಸ್ತೆಗಳ ಡಿಪಿಆರ್ ರಚಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸ ಬೇಕು ಎಂದು ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿ 75-ರಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ತಡೆಗೋಡೆ ಮರುನಿರ್ಮಾಣಕ್ಕೆ ನೀಲಿನಕ್ಷೆ ಸಿದ್ಧಪಡಿಸಬೇಕು. ಅಲ್ಲದೆ ದುಸ್ಥಿತಿಯಲ್ಲಿರುವ ಪಟ್ಟಣದ ಹೇಮಾವತಿ ಸೇತುವೆ ಸಂರಕ್ಷಣೆಗೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳ ಬೇಕು ಎಂದರು.
ಆಲೂರು ತಾಲೂಕಿನಲ್ಲಿ 35 ಶಾಲೆಗಳು ದುಸ್ಥಿತಿಗೆ ಒಳಗಾಗಿದ್ದರೆ ಸಕಲೇಶಪುರ ತಾಲೂಕಿನಲ್ಲೂ ನೂರಕ್ಕೂ ಅಧಿಕ ಶಾಲೆ, ಶೌಚಗೃಹಗಳು ದುಸ್ಥಿತಿಯಲ್ಲಿವೆ. ಈ ಸಂಭದ ಜಿ.ಪಂ ಇಂಜನೀಯರ್‌ಗಳು ಸ್ಥಳಕ್ಕೆ ತೆರಳಿ ಡಿಪಿಎರ್ ಸಿದ್ಧಪಡಿಸಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ, ಲೋಕಪಯೋಗಿ ಇಲಾಖೆ ಎಇಇ ರಜಾಕ್, ಎತ್ತಿನಹೊಳೆ ಇಲಾಖೆಯ ಎಇಇ ಪ್ರಮೋದ್ ಸೇರಿದಂತೆ ಆಲೂರು, ಕಟ್ಟಾಯ ಹಾಗೂ ಸಕಲೇಶಪುರ ತಾಲೂಕಿನ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.