ಹೊಳೆನರಸೀಪುರ ತಾಲೂಕು ಕಚೇರಿಯಲ್ಲಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ರೇಣು ಕುಮಾರ್ ಹಾಗೂ ಕೆಲವೇ ಅಧಿಕಾರಿಗಳು ಪಾಲ್ಗೊಂಡಿದ್ದರು. 
ಹಾಸನ

ವರ್ಷದ ಮೊದಲ ಸಭೆಗೆ ಅಧಿಕಾರಿಗಳ ಗೈರು

ಪ್ರಮುಖ ಮುಖ್ಯಾಂಶಗಳು

  • ಅಸಮಧಾನ ಹೊರಹಾಕಿದ ತಹಸೀಲ್ದಾರ್
ಹೊಳೆನರಸೀಪುರ: ಹೊಸ ವರ್ಷದ ಮೊದಲ ಜನಸ್ಪಂದನಾ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರಾಗಿದ್ದು, ಕೆಲವರು ಬೇಜವಾಬ್ದಾರಿ ತೋರಿದ್ದಾರೆ ಎಂದು ತಹಶೀಲ್ದಾರ್ ವೈ.ಎಂ.ರೇಣು ಕುಮಾರ್ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಣೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಶನಿವಾರ ಆಯೋಜನೆಗೊಂಡಿತ್ತು.
10 ಗಂಟೆಗೆ ಆರಂಭವಾದ ಜನಸ್ಪಂದನಾ ಕಾರ್ಯಕ್ರಮ ಪ್ರಾರಂಭವಾಗಿ ಒಂದೂವರೆ ಗಂಟೆಯಾದರೂ ಯಾವೊಬ್ಬ ಅಧಿಕಾರಿಗಳು ಸಭೆಗೆ ಬಂದಿರಲಿಲ್ಲ. ಪತ್ರಕರ್ತರು ಕಾರ್ಯಕ್ರಮಕ್ಕೆ ತೆರಳಿ ಗಮನಿಸಿದಾಗ ಕೆಲವೇ ಜನ ಮಾತ್ರ ಹಾಜರಿದ್ದು ಉಳಿದೆಲ್ಲ ಕುರ್ಚಿಗಳು ಖಾಲಿ ಇದ್ದವು. ಇದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿತ್ತು. 
ಕೆಲವು ಅಧಿಕಾರಿಗಳು ಜನ ಸ್ಪಂದನಾ ಕಾರ್ಯಕ್ರಮಕ್ಕೆ ತಮ್ಮ ಕಚೇರಿಯ ಸಿಬ್ಬಂದಿಯನ್ನು ಕಳುಹಿಸಿ ಕೈ ತೊಳೆದುಕೊಂಡಿದ್ದರು. ಇದನ್ನು ಗಮನಿಸಿದ ದಂಡಾಧಿಕಾರಿಗಳು ಸಭಾಂಗಣಕ್ಕೆ ಆಗಮಿಸುತ್ತಿದ್ದ ಪ್ರತಿಯೊಬ್ಬ ಇಲಾಖೆಯ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದರು. ತಹಸೀಲ್ದಾರ್ ಪ್ರಶ್ನೆಗಳಿಗೆ ಕಕ್ಕಾಬಿಕ್ಕಿಯಾದ ಸಿಬ್ಬಂದಿ ಉತ್ತರ ನೀಡಲು ತಡವರಿಸಿದರು. 
ಇದರಿಂದ ಅಸಮಾಧಾನಗೊಂಡ ತಹಸೀಲ್ದಾರ್ ರೇಣುಕುಮಾರ್, ತಾಲೂಕು ಆಡಳಿತ ವೆಂದರೆ ಕೇವಲ ತಹಸೀಲ್ದಾರ್ ಅವರಿಗೆ ಮಾತ್ರ ಸೇರಿದೆ ಎಂದು ತಿಳಿದುಕೊಂಡಿದ್ದೀರಿ. ಆದರೆ ತಾಲೂಕಿನ ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಜವಾಬ್ದಾರಿ ಕೂಡ ಇದೆ. ಎಂಬುದನ್ನು ಎಲ್ಲರೂ ಮರೆತಿದ್ದೀರಿ. ಸರ್ಕಾರದ 20 ಇಲಾಖೆಗಳಲ್ಲಿ ಕೇವಲ 6 ರಿಂದ 7 ಜನ ಇಲಾಖಾ ಮುಖ್ಯಸ್ಥರು ಬಂದಿದ್ದಾರೆ. ಜನಸ್ಪಂದನಾ ಕಾರ್ಯಕ್ರಮಕ್ಕೆ ಬರದಿದ್ದರೆ ಸಾರ್ವಜನಿಕರಿಗೆ, ಅರ್ಜಿದಾರರಿಗೆ ಏನು ಉತ್ತರ ಕೊಡಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು. 
ಸಾರ್ವಜನಿಕರು ತಮ್ಮ ತಮ್ಮ ಸಮಸ್ಯೆಗಳನ್ನು ಹಿಡಿದು ಅರ್ಜಿ ಸಮೇತ ಬಂದಿದ್ದಾರೆ. ಅಷ್ಟೇ ಅಲ್ಲದೆ ನೋಂದಣಿ ಮಾಡಿಸಿದ್ದಾರೆ. ಅವರಿಗೆ ಮಾಹಿತಿ ಕೊಡುವವರು ಯಾರು ಎಂದು ಕಿಡಿಕಾರಿದರು. ತಡವಾಗಿ ಬರುವ ಅಥವಾ ಸಭೆಗೆ ಗೈರಾಗುವ ಇಲಾಖೆ ಮತ್ತು ಇಲಾಖೆಯ ಮುಖ್ಯಸ್ಥರ ಹೆಸರುಗಳನ್ನು ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು. 12 ಗಂಟೆಯ ನಂತರ ಕೆಲವು ಅಧಿಕಾರಿಗಳು ಮಾತ್ರ ತಡವಾಗಿ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತಾಲೂಕು ಮಟ್ಟದ ಜನಸ್ಪಂದನಾ ಸಭೆಗೆ ಪುರಸಭೆ ಹಾಗೂ ತಾಲೂಕು ಪಂಚಾಯಿತಿಗೆ ಸಂಬಂಧಿಸಿದ ತಲಾ ಎರಡು ಅರ್ಜಿಗಳು, ಅರಣ್ಯ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸಂಬಂಧಿಸಿದ ತಲಾ ಒಂದು ಅರ್ಜಿ, ಕಂದಾಯ ಇಲಾಖೆಗೆ ಸಂಬಂಧಿಸಿದ 10 ಅರ್ಜಿ ಸೇರಿ ಒಟ್ಟು 16 ಅರ್ಜಿಗಳು ಬಂದಿದ್ದು ತುರ್ತಾಗಿ ಅರ್ಜಿದಾರರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತೇವೆ. ಇಂದಿನಿಂದಲೇ ಅವರ ಸಮಸ್ಯೆಗಳನ್ನು ಪರಿಶೀಲಿಸುತ್ತೇವೆ ಎಂದು ತಹಸೀಲ್ದಾರ್ ಭರವಸೆ ನೀಡಿದರು. 
ಇದೇ ಸಂದರ್ಭದಲ್ಲಿ ಇಒ ಮುನಿರಾಜ್, ಬಿಇಒ ಸೋಮಲಿಂಗೇಗೌಡ, ಟಿಎಚ್‌ಒ ಡಾ. ರಾಜೇಶ್  ಸೇರಿದಂತೆ ಇತರರು ಹಾಜರಿದ್ದರು.