ಬೇಲೂರು ಪಟ್ಟಣ ಸಮೀಪದ ಯಗಚಿ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ.ಸುರೇಶ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮ್ಮುಖದಲ್ಲಿ ಬಾಗಿನ ಅರ್ಪಿಸಿದರು.
ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಭರ್ತಿಯಾದ ಯಗಚಿ ಜಲಾಶಯಕ್ಕೆ ಶನಿವಾರ ಶಾಸಕ ಎಚ್.ಕೆ.ಸುರೇಶ್ ಬಾಗಿನ ಅರ್ಪಿಸಿದರು. ಬಳಿಕ ಸಾಂಕೇತಿಕವಾಗಿ ಹೆಚ್ಚುವರಿ ನೀರನ್ನು ಯಗಚಿ ನದಿಗೆ ಹರಿಸಲಾಯಿತು.
ಜಲಾಶಯಕ್ಕೆ ಬಾಗಿನ ಅರ್ಪಿಸಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, ಈ ವರ್ಷ ಬರಗಾಲದಿಂದ ರೈತರು ತತ್ತರಿಸಿದ್ದಾರೆ. ಅದರೂ ಮಲೆನಾಡು ಭಾಗದಲ್ಲಿ ಬರುತ್ತಿರುವ ಮಳೆಯಿಂದ ಪಟ್ಟಣ ಸಮೀಪದ ಯಗಚಿ ಜಲಾಶಯಕ್ಕೆ ನೀರು ಹರಿದು ಬಂದ ಕಾರಣ ಭರ್ತಿಯಾಗಿದೆ. ಹೆಚ್ಚುವರಿ ನೀರನ್ನು ನದಿಗೆ ಹರಿಸಬೇಕು ಇಲ್ಲದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಹಾಗಾಗಿ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದೇವೆ. ಮುಂದಿನ ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ನೀರಾವರಿ ಸಚಿವರು ಮತ್ತು ಸ್ವಾಮೀಜಿಗಳ ಸಾರಥ್ಯದಲ್ಲಿ ಬಾಗಿನ ಅರ್ಪಿಸಲಾಗುವುದು. ಬಯಲು ಸೀಮೆಗೆ ಈಗಾಗಲೇ ಎತ್ತಿನಹೊಳೆ ಕಾಲುವೆಯಿಂದ ನೀರು ಸೇರಿದೆ. ಯಗಚಿ ಏತ ನೀರಾವರಿ ಮೂಲಕ ನೀರನ್ನು ಹರಿಸುವ ಕಡೆ ಅಧಿಕಾರಿಗಳು ಮುಂದಾಗಬೇಕು ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಪಿಐ ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ, ಪಿಎಸ್‌ಐ ಶಿವಾನಂದ ಪಾಟೀಲ್, ಯಗಚಿ ಜಲಾಶಯದ ಇಂಜಿನಿಯರ್ ರಾಮಕೃಷ್ಣ, ಸಂದೀಪ್, ಕರವೇ ಅಧ್ಯಕ್ಷ ಚಂದ್ರಶೇಖರ್, ಡಾ.ರಾಜಕುಮಾರ್, ಸಂಘದ ಅಧ್ಯಕ್ಷ ತೀರ್ಥಂಕರ್, ಬಿಜೆಪಿ ತಾಲೂಕು ಅಧ್ಯಕ್ಷ ಸಂಜು ಕೌರಿ ಇತರರಿದ್ದರು.
ಚಿಕ್ಕಮಗಳೂರು ಜಿಲ್ಲೆಯಿಂದ ಹರಿಯುವ ಯಗಚಿ ನದಿ ಹಾಸನ ಜಿಲ್ಲೆಯ ಹೇಮಾವತಿಗೆ ಉಪನದಿಯಾಗಿ ಸೇರ್ಪಡೆಗೊಳ್ಳುತ್ತದೆ. ಯಗಚಿ ನದಿಯೂ ಬೇಲೂರು ಮೂಲಕ ಹಾದು ಹೋಗುವ ಹಿನ್ನೆಲೆಯಲ್ಲಿ ಪಟ್ಟಣ ಸಮೀಪದಲ್ಲೇ 3.6 ಟಿಎಂಸಿ ನೀರಿನ ಸಾಮರ್ಥ್ಯವಿರುವ ಜಲಾಶಯವಾಗಿದೆ. ಪ್ರಸಕ್ತ ವರ್ಷದ ಮುಂಗಾರು ವಿಳಂಭದಿಂದ ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಬಿದ್ದ ಉತ್ತಮ ಮಳೆ ನೀರು ನದಿ ಮೂಲಕ ಜಲಾಶಯಕ್ಕೆ ಹರಿದು ಬಂದಿರುವುದರಿಂದ ಜಲಾಶಯ ಭರ್ತಿಯಾಗಿದೆ. ಮತ್ತೆ ಮಳೆ ಬಂದರೆ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಶಾಸಕ ಎಚ್.ಕೆ.ಸುರೇಶ್ ನೇತೃತ್ವದಲ್ಲಿ ಸಾಂಕೇತಿಕವಾಗಿ ನದಿಗೆ ನೀರು ಹರಿಸಲಾಯಿತು.