ಚೆನ್ನಮ್ಮ ಅವರ ಸಮಾಧಿಗೆ ದೇವೇಗೌಡರು ಹಾಗು ಕುಟುಂಬಸ್ಥರು ಮೂರನೇ ದಿನದ ಹಾಲು ತುಪ್ಪ ಕಾರ್ಯ ನೆರವೇರಿಸಿದರು.
- ಚೆನ್ನಮ್ಮ ಸಮಾಧಿಗೆ ಹಾಲು-ತುಪ್ಪ ಸಮರ್ಪಣೆ
- ಮೂರನೇ ದಿನದ ಕಾರ್ಯದಲ್ಲಿ ಕುಟುಂಬಸ್ಥರು ಭಾಗಿ
- ಅಮ್ಮನಿಗೆ ಇಷ್ಟವಾದ ಚಕ್ಕುಲಿ, ಮೈಸೂರು ಪಾಕ್ ಇಟ್ಟು ಪೂಜೆ
ಹಾಸನ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಸಮಾಧಿಗೆ ಬುಧವಾರ ದೇವೇಗೌಡರು ಹಾಗೂ ಕುಟುಂಬಸ್ಥರು ಮೂರನೇ ದಿನದ ಹಾಲು ತುಪ್ಪ ಕಾರ್ಯ ನೆರವೇರಿಸಿದರು.
ಬೆಳಗ್ಗೆ 9 ಗಂಟೆಗೆ ಸಮಾಧಿ ಸ್ಥಳಕ್ಕೆ ಆಗಮಿಸಿದ ಅರ್ಚಕರು ಹಾಗೂ ಗೌಡರ ಕುಟುಂಬಸ್ಥರು ಆರಂಭದ ಪೂಜೆಯಲ್ಲಿ ಭಾಗಿಯಾದರು. ನಂತರ ದೊಡ್ಡಗೌಡರು ಸಮಾಧಿಗೆ ಅರಿಶಿಣ, ಕುಂಕುಮ ಅರ್ಪಿಸಿ ಹಾಲು ತುಪ್ಪ ಬಿಟ್ಟರು. ಅವರ ಬಳಿಕ ಕುಟುಂಬದ ಎಲ್ಲ ಸದಸ್ಯರು, ಬಂಧು ಮಿತ್ರರು, ಜನಪ್ರತಿನಿಧಿಗಳು ಕಾರ್ಯದಲ್ಲಿ ಭಾಗಿಯಾದರು. ವಿಷ್ಣು ಸಹಸ್ರನಾಮ ಪಠಣವೂ ನೆರವೇರಿತು.
ಎಚ್.ಡಿ.ದೇವೇಗೌಡ ಹಾಗೂ ಪುತ್ರರಾದ ಎಚ್.ಡಿ.ಬಾಲಕೃಷ್ಣ, ಎಚ್.ಡಿ. ರಮೇಶ್, ಎಚ್.ಡಿ.ಕುಮಾರಸ್ವಾಮಿ, ಎಚ್.ಡಿ.ರೇವಣ್ಣ, ಸೊಸೆಯಂದಿರಾದ ಭವಾನಿ, ಅನಿತಾ ಕುಮಾರಸ್ವಾಮಿ, ಪುತ್ರಿಯರಾದ ಅನಸೂಯಾ, ಶೈಲಜಾ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ, ಶಾಸಕರಾದ ಎ.ಮಂಜು, ಸಿ.ಎನ್.ಬಾಲಕೃಷ್ಣ, ಎಚ್.ಪಿ.ಸ್ವರೂಪ್, ರಮೇಶ್‌ಬಾಬು, ಎಸ್.ಎಲ್.ಭೋಜೇಗೌಡ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು. ದಕ್ಷಿಣ ಆಫ್ರಿಕಾದಿಂದ ಆಗಮಿಸಿದ್ದ ದೇವೇಗೌಡರ ಅಭಿಮಾನಿಗಳು ಹಾಲು ತುಪ್ಪ ಬಿಟ್ಟು ಗಮನಸೆಳೆದರು.
ಗಾಢ ಮೌನಕ್ಕೆ ಜಾರಿದ್ದ ಗೌಡರು
ಎಚ್.ಡಿ.ದೇವೇಗೌಡ ಅವರು ಬೆಳಗ್ಗೆಯಿಂದಲೂ ಗಾಢ ಮೌನದಲ್ಲೇ ಇದ್ದರು. ಪತ್ನಿಯ ಸಮಾಧಿ ಬಳಿಯೇ ವೀಲ್‌ಚೇರ್‌ನಲ್ಲಿ ಕುಳಿತಿದ್ದ ಅವರು ಯಾರೊಂದಿಗೂ ಮಾತನಾಡದೆ ಸಮಾಧಿಯತ್ತ ದೃಷ್ಟಿ ಹರಿಸಿದ್ದರು. ಪೂಜೆ ಬಳಿಕ ಪುತ್ರಿ ಅನಸೂಯಾ, ಮೊಮ್ಮಗಳಿಂದ ಪೂಜೆ ಮಾಡಿಸಿ, ಇವಳೇ ಅಮ್ಮನಿಗೆ ಊಟ ಕೊಟ್ಟು ನೋಡಿಕೊಳ್ಳುತ್ತಿದ್ದಳು ಎಂದಾಗ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಗಳಗಳನೆ ಅತ್ತರು.
ಅಂತ್ಯಕ್ರಿಯೆಯಾದ ಮೂರನೇ ದಿನ ಹಾಲು ತುಪ್ಪ ಬಿಡುವುದು ಸಂಪ್ರದಾಯ. ಎಲ್ಲ್ಲ ಪ್ರೀತಿ ಪಾತ್ರರು ಆಗಮಿಸಿ ಶ್ರದ್ಧಾ ಭಕ್ತಿಯಿಂದ ಹಾಲು ತುಪ್ಪ ಬಿಟ್ಟು ಅಮ್ಮನವರ ಸದ್ಗತಿಗೆ ಪ್ರಾರ್ಥಿಸಿದ್ದಾರೆ. ಮೈಸೂರು ಪಾಕ್ ಹಾಗೂ ಚಕ್ಕುಲಿ ಇಷ್ಟವಾದ್ದರಿಂದ ಅದನ್ನು ಮನೆಯಲ್ಲೇ ತಯಾರಿಸಿ ಸಮರ್ಪಿಸಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು 11 ದಿನಗಳವರೆಗೆ ಪಾರಾಯಣ ಹಾಗೂ ವಿಷ್ಣು ಸಹಸ್ರನಾಮ ನೆರವೇರಲಿದೆ ಎಂದು ಅನಸೂಯಾ ತಿಳಿಸಿದರು.