ಹೊಳೆನರಸೀಪುರ ಪಟ್ಟಣದ ಸ್ವರ್ಣ ವಿದ್ಯಾಸಂಸ್ಥೆಯಲ್ಲಿ ಮಕ್ಕಳು ಶಾಲಾ ಅವಧಿಯಲ್ಲಿ ಸೀಮೆಂಟ್ ಇಟ್ಟಿಗೆ ಹೊರುತ್ತಿರುವುದು.
ಹೊಳೆನರಸೀಪುರ: ಪಟ್ಟಣದ ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಆಡಳಿತ ಮಂಡಳಿ ವಿದ್ಯಾರ್ಥಿಗಳಿಂದ ಇಟ್ಟಿಗೆ ಹೊತ್ತೊಯ್ಯುವ ಕೆಲಸ ಮಾಡಿಸುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ಕೇಳಿ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ.
ಶಾಲೆಯಲ್ಲಿ ಮೇಲಂತಸ್ತಿನ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದ್ದು ಬುಧವಾರ ಮಧ್ಯಾಹ್ನ ಸಿಮೆಂಟ್ ಇಟ್ಟಿಗೆಗಳನ್ನು ಮೇಲಂತಸ್ತಿಗೆ ವಿದ್ಯಾರ್ಥಿಗಳು ಹೊತ್ತೊಯ್ಯತ್ತಿದ್ದ ದೃಶ್ಯವನ್ನು ತಾಲೂಕಿನ ಚಿಕ್ಕಚಾಗಹಳ್ಳಿ ಗ್ರಾಮದ ವಾಸು ಎಂಬ ಕಟ್ಟಡ ಕಾರ್ಮಿಕ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದಾನೆ. ನಂತರ ವಿಷಯನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಗೆ ತಿಳಿಸಿದ್ದಾರೆ. ಬಳಿಕ ಕರವೇ ಕಾರ್ಯಕರ್ತ ನವೀನ್‌ಕುಮಾರ್ ಬಿಇಒಗೆ ಲಿಖಿತ ದೂರು ನೀಡಿದ್ದಾರೆ.
ಶಾಲೆಗೆ ತಹಸೀಲ್ದಾರ್ ರೇಣುಕುಮಾರ್, ಬಿಇಒ ಸೋಮಲಿಂಗೇಗೌಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನೆ ಸಂಬಂಧ ವಿವರಣೆ ನೀಡುವಂತೆ ಬಿಇಒ ನೋಟಿಸ್ ಜಾರಿ ಮಾಡಿದ್ದಾರೆ.
ಶೈಕ್ಷಣಿಕ ಸಂಸ್ಥೆಯೊಂದು ಮಕ್ಕಳನ್ನು ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಲಾ ಸಮಯದಲ್ಲೇ ದುಡಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಈ ಬಗ್ಗೆ ವಿವರಣೆ ಕೇಳಿ ನೋಟಿಸ್ ನೀಡಿದ್ದೇವೆ. ಅವರು ವಿವರಣೆ ನೀಡಿದ ನಂತರ ಮುಂದಿನ ಕ್ರಮಕ್ಕೆ ಮೇಲಧಿಕಾರಿಗಳಿಗೆ ವರದಿ ಮಾಡಲಾಗುವುದು.
ಸೋಮಲಿಂಗೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ, ಹೊಳೆನರಸೀಪುರ
ವಿದ್ಯಾರ್ಥಿಗಳಿಂದ ಕೂಲಿ ಕಾರ್ಮಿಕರ ಕೆಲಸ ಮಾಡಿಸುತ್ತಿರುವ ಶಿಕ್ಷಣ ಸಂಸ್ಥೆಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು.
ನವೀನ್ ಕುಮಾರ್, ಕರವೇ ಯುವ ಘಟಕದ ಅಧ್ಯಕ್ಷ, ಮಲ್ಲಪ್ಪನಹಳ್ಳಿ