ಅರಸೀಕೆರೆ ನಗರದ ಎಪಿಎಂಸಿ ಪ್ರಾಂಗಣಕ್ಕೆ ಶಾಸಕ ಎಚ್. ಡಿ.ರೇವಣ್ಣ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಜಿ.ಎಸ್. ಪರಮೇಶ್ವರಪ್ಪ,ಅಶೋಕ್ ವಿವೇಕ್, ಗಿರೀಶ್, ಮಂಜಣ್ಣ, ಕುಮಾರಣ್ಣ ಇತರರಿದ್ದರು.
- ಶಾಸಕ ಎಚ್.ಡಿ.ರೇವಣ್ಣ ಹೇಳಿಕೆ
- ನಗರದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ
ಅರಸೀಕೆರೆ: ರಾಗಿ ಖರೀದಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ನಗರದ ಎಪಿಎಂಸಿ ಪ್ರಾಂಗಣಕ್ಕೆ ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಯನ್ನು 4886 ರೂ. ನೀಡಿ ಖರೀದಿ ಮಾಡುತ್ತಿದೆ. ತಾಲೂಕಿನಲ್ಲಿ 21 ಸಾವಿರ ಅನ್ನದಾತರು ನೋಂದಣಿ ಮಾಡಿಸಿದ್ದು, ಜೆಸಿಪುರ, ಬಾಣಾವರ, ಜಾವಗಲ್, ಗಂಡಸಿ ಉಪ ಪ್ರಾಂಗಣ ಹಾಗೂ ನಗರದ ಎಪಿಎಂಸಿ ಪ್ರಾಂಗಣದಲ್ಲಿ ಪ್ರಕ್ರಿಯೆ ಆರಂಭಿಸಲಾಗಿದೆ. ಕೆಲ ವರ್ತಕರು ರೈತರ ಪಹಣಿ ಪಡೆದು ಕಳಪೆ ದಾಸ್ತಾನು ಮಾರಾಟ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ. ಉಭಯ ಸರ್ಕಾರಗಳ ಮಹತ್ವಾಕಾಂಕ್ಷಿ ಕಾರ್ಯಕ್ಕೆ ಯಾವುದೇ ಕಾರಣಕ್ಕೂ ಅಡಚಣೆ ಬಾರದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ನೋಂದಣಿ ಮಾಡಿದ ರೈತ ನಿಗದಿತ ದಿನವೇ ರಾಗಿ ಮಾರಾಟ ಮಾಡಲು ಅವಕಾಶ ನೀಡುವ ಜತೆಗೆ ಪಾರದರ್ಶಕತೆ ಕಾಪಾಡಬೇಕು. ಖರೀದಿ ಹೆಸರಿನಲ್ಲಿ ನಡೆಯುವ ಲೋಪ ಸಹಿಸುವುದಿಲ್ಲ ಎಂದರು.
ಅಹವಾಲು ಸ್ವೀಕಾರ: ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಸರ್ಕಾರ ರಾಗಿ ಖರೀದಿಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ ಗಂಡಸಿ ಸೇರಿದಂತೆ ಕೆಲ ಕೇಂದ್ರಗಳಲ್ಲಿ ನೈಜ ರೈತರಿಗೆ ದಾಸ್ತಾನು ಮಾರಾಟ ಮಾಡುವುದು ಸವಾಲಾಗಿ ಪರಿಣಮಿಸಿದೆ. ರಾಗಿ ತುಂಬಿದ ಲಾರಿಗಳು ಉಪ ಪ್ರಾಂಗಣಕ್ಕೆ ದಿಢೀರನೆ ಧಾವಿಸುತ್ತಿದ್ದು, ಅಧಿಕಾರಿಗಳು ಅಸಹಾಯಕರಾಗಿದ್ದಾರೆ. ಅನ್ನದಾತರ ಪಹಣಿ ಪಡೆದು ತಮ್ಮ ವ್ಯವಹಾರ ಕುದುರಿಸುವ ಕೆಲಸವೂ ನಡೆಯುತ್ತಿದೆ. ಗುಣಮಟ್ಟದ ಪರೀಕ್ಷೆ ಕಟ್ಟುನಿಟ್ಟಿನ ರೀತಿಯಲ್ಲಿ ನಡೆಯಲು ಸೂಚಿಸಬೇಕು ಎಂದು ಎಚ್.ಡಿ.ರೇವಣ್ಣ ಅವರಿಗೆ ರೈತರು ಅಹವಾಲು ಸಲ್ಲಿಸಿದರು.
ನಗರದ ಹೃದಯ ಭಾಗದಲ್ಲಿರುವ ತರಕಾರಿ ಮಾರುಕಟ್ಟೆ ಆವರಣಕ್ಕೆ ತೆರಳಿ ವರ್ತಕರ ಸಂಕಷ್ಟ ಆಲಿಸಿದರು. ಬಡವರ ಹೊಟ್ಟೆಯ ಮೇಲೆ ಹೊಡೆಯುವ ಪ್ರಶ್ನೆಯೇ ಇಲ್ಲ. ಅಭಿವೃದ್ಧಿ ಕಾಮಗಾರಿ ಹೆಸರಿನಲ್ಲಿ ದುಡಿಯುವ ವರ್ಗದ ಜನರಿಗೆ ಅನ್ಯಾಯ ಮಾಡುವುದು ಸರಿಯಲ್ಲ. ತೆರವುಗೊಳಿಸಿದ ಜಾಗದಲ್ಲಿಯೇ ಮಾಲೀಕರಿಗೆ ಅಂಗಡಿ ತೆರೆಯಲು ಅವಕಾಶ ಕಲ್ಪಿಸಬೇಕು. ಫುಡ್‌ಕೋರ್ಟ್ ಮಾಡುವ ನೆಪದಲ್ಲಿ ತೊಂದರೆ ಕೊಟ್ಟರೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಬೀದಿಗಿಳಿದು ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬಾಲಕಿಯರ ಪದವಿ ಪೂರ್ವ ಕಾಲೇಜು ರಸ್ತೆ ಅತಿಕ್ರಮಣ ವೀಕ್ಷಿಸಿ ಲೋಪ ಸರಿಪಡಿಸುವಂತೆ ಪೊಲೀಸರಿಗೆ ಹೇಳಿದರು. ಎಪಿಎಂಸಿ ಕಾರ್ಯದರ್ಶಿ ಸಿದ್ದರಂಗಸ್ವಾಮಿ, ರಾಗಿ ಖರೀದಿ ಅಧಿಕಾರಿ ಶ್ರೀನಾಥ್, ಮಾಜಿ ಶಾಸಕ ಜಿ.ಎಸ್.ಪರಮೇಶ್ವರಪ್ಪ, ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ರಾಂಪುರ ಶೇಖರಪ್ಪ, ಜನತಾ ಬಜಾರ್ ಅಧ್ಯಕ್ಷ ಗಂಡಸಿ ಮಂಜಣ್ಣ, ಜಿ.ಪಂ.ಮಾಜಿ ಸದಸ್ಯ ಬಾಣಾವರ ಅಶೋಕ್, ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್, ಮಾಜಿ ಅಧ್ಯಕ್ಷ ವಿದ್ಯಾಧರ್, ವಕೀಲ ವಿವೇಕ್, ತಾಪಂ ಮಾಜಿ ಉಪಾಧ್ಯಕ್ಷ ಬಸವಲಿಂಗಪ್ಪ, ಮುಖಂಡರಾದ ಹುಲ್ಲೇಕೆರೆ ಕುಮಾರಣ್ಣ, ಕೆಂಕೆರೆ ಕೇಶವಮೂರ್ತಿ, ರಮೇಶ್ ನಾಯ್ಡು, ಗಣೇಶ್, ಯೋಗೀಶ್, ಲೋಕೇಶ್, ಪವನ್,ಯೂನಸ್ ಸೇರಿದಂತೆ ಹಲವರು ಇದ್ದರು.