ಅರಸೀಕೆರೆ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಜರುಗಿದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಧರ್ಮಶೇಖರ್ ಮಾತನಾಡಿದರು. ಗಂಗಣ್ಣ, ಕೆಸಿಡಿ ಕುಮಾರ್, ಸಿದ್ದೇಶ್, ಕಾಂತರಾಜ್ ಇತರರಿದ್ದಾರೆ.
ಅರಸೀಕೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿದಂತೆ ಕೆಲ ಯೋಜನೆಗಳ ಹಣ ಕೆಲವು ಫಲಾನುಭವಿಗಳ ಮರಣ ನಂತರವೂ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಈ ರೀತಿಯ ಲೋಪಗಳನ್ನು ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸ ಅರ್ಜಿಗಳನ್ನು ಹಾಕಲು ಸರಳ ಕ್ರಮಗಳನ್ನು ಅಳವಡಿಸಿ ನೂತನ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಶಾಸಕ ಕೆ.ಎಂ ಶಿವಲಿಂಗೇಗೌಡರ ಶಿಫಾರಸಿನಂತೆ ಕಾಂತರಾಜು ಅವರನ್ನು ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ನೂತನ ಉಪಾಧ್ಯಕ್ಷರು ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸಲು ಕೈಜೋಡಿಸಬೇಕು ಎಂದರು.
ಸಿಡಿಪಿಒ ಯೋಗೀಶ್ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಹಣ 90 ಮೃತ ಮಹಿಳೆಯರ ಖಾತೆಗೆ ಸಂದಾಯವಾಗಿದ್ದು, ಹಿಂಪಡೆಯಲು ಈಗಾಗಲೇ ಕಾರ್ಯೋನ್ಮುಖರಾಗಿದ್ದೇವೆ. ಅರ್ಹ ಫಲಾನುಭವಿಗಳ ಬಗ್ಗೆ ಮನೆ ಮನೆಗೆ ಮೇಲ್ವಿಚಾರಕರು ಭೇಟಿ ನೀಡುತ್ತಿದ್ದು, ಲೋಪ ಕಂಡುಬಂದರೆ ಸರಿಪಡಿಸಲಾಗುವುದು ಎಂದು ಮಾಹಿತಿ ನೀಡಿದರು. ಸೆಸ್ಕ್, ಆಹಾರ ಹಾಗೂ ವಿದ್ಯಾನಿಧಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಯಿತು.
ತಾಪಂ ಇಒ ಗಂಗಣ್ಣ, ಕೆಪಿಸಿಸಿ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ರವಿಚಂದ್ರನ್, ನೂತನ ಉಪಾಧ್ಯಕ್ಷ ಕಾಂತರಾಜು, ಸದಸ್ಯರಾದ ಸಿದ್ದೇಶ್ ಜಾಜೂರು, ಬಿ.ಎಸ್ ಬಸವರಾಜು, ಕೃಷ್ಣೇಗೌಡ, ಪುರುಷೋತ್ತಮ, ಲೋಕೇಶ್, ಸೀರಾಜ್ ಅಲಿಬೇಗ್, ಚಾಂದ್ ಪಾಷ, ವಿರೂಪಾಕ್ಷ, ಪ್ರದೀಪ್ ಕುಮಾರ್, ಶಿವಕುಮಾರ್, ಕೆಡಿಪಿ ಸದಸ್ಯ ಅಜ್ಜಪ್ಪ, ಗಂಡಸಿ ಕಮಲಮ್ಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.