ಹಾಸನ ನಗರದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಇತ್ತೀಚೆಗೆ ನಡೆದ ಚೋಮನ ದುಡಿ ಕಾದಂಬರಿ ಕುರಿತ ವಿಮರ್ಶೆ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಇಂಜಿನಿಯರ್ ಕೆ.ಆರ್. ಕವಿತಾ, ಕಲಾವತಿ ಮಧುಸೂಧನ್, ಮಂಜಯ್ಯ ಇತರರಿದ್ದರು. 
ಹಾಸನ

ಅಮೂಲ್ಯ ಸಮಯವನ್ನು ಎಂದಿಗೂ ವ್ಯರ್ಥ ಮಾಡದಿರಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಅಮೂಲ್ಯ ಸಮಯವನ್ನು ಎಂದಿಗೂ ವ್ಯರ್ಥ ಮಾಡದಿರಿ
  • ಕೆ.ಆರ್. ಕವಿತಾ ಕಿವಿಮಾತು
  • ಚೋಮನ ದುಡಿ ಕಾದಂಬರಿ ವಿಮರ್ಶೆ ಕಾರ್ಯಕ್ರಮ
ಹಾಸನ: ವಿದ್ಯಾರ್ಥಿಗಳು ತಮ್ಮ ಜೀವನದ ಅಮೂಲ್ಯ ಸಮಯವನ್ನು ಎಂದಿಗೂ ವ್ಯರ್ಥ ಮಾಡದೆ ಓದುವ ಸಮಯದಲ್ಲಿ ಗಮನವಿಟ್ಟು ವಿದ್ಯಾಭ್ಯಾಸ ಮಾಡಬೇಕು ಎಂದು ಹಾಸನ ನಗರಸಭೆ ಇಂಜಿನಿಯರ್ ಕೆ.ಆರ್. ಕವಿತಾ ಹೇಳಿದರು.
ನಗರದ ಆರ್.ಸಿ. ರಸ್ತೆ ಗಂಧದಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಇತ್ತೀಚೆಗೆ ನಡೆದ ‘ಚೋಮನ ದುಡಿ’ ಕಾದಂಬರಿ ಕುರಿತ ವಿಮರ್ಶೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಯುವಕರು ಜಾತಿಯನ್ನು ತೊರೆದು ಹೃದಯವಂತಿಕೆ ಮತ್ತು ಮಾನವೀಯತೆ ಗುಣಗಳನ್ನು ಬೆಳೆಸಿಕೊಳ್ಳಬೇಕು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ತಂದೆ-ತಾಯಿಯನ್ನು ನೆನಪಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಸಾವಿರಾರು ದಾರಿಗಳಿದ್ದು, ಪ್ರತಿಯೊಬ್ಬರು ತಮ್ಮ ಆಸಕ್ತಿ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಗೌರವವಿದ್ದು, ಎಲ್ಲ ವೃತ್ತಿಗಳನ್ನು ಸಮಾನವಾಗಿ ಗೌರವಿಸುವ ಮನೋಭಾವನ್ನು ಬೆಳೆಸಿಕೊಳ್ಳಬೇಕು. ಗುರುಗಳ ಮಾರ್ಗದರ್ಶನ ಪಡೆದುಕೊಂಡು ವಿದ್ಯಾರ್ಥಿಗಳ ಜೀವನವನ್ನು ಉನ್ನತ್ತ ಮಟ್ಟಕ್ಕೆ ಹೋಗಬೇಕು ಎಂದರು.
ರಾಜ್ಯ ಸ್ಪಂದನ ಸಿರಿವೇದಿಕೆ ಅಧ್ಯಕ್ಷೆ ಕಲಾವತಿ ಮಧುಸೂದನ್ ಮಾತನಾಡಿ, ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವುದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಬಹುದು. ಸಾಹಿತ್ಯ ಅಭಿರುಚಿ ಮಕ್ಕಳ ಮನಸ್ಸಿಗೆ ಸಂಸ್ಕಾರ, ಸೃಜನಶೀಲತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ತುಂಬುತ್ತದೆ. ಅತ್ಮಸ್ಥೈರ್ಯ ಹೊಂದಿದ ಮಕ್ಕಳು ಭವಿಷ್ಯದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮಂಜಯ್ಯ ಮಾತನಾಡಿ, ಕನ್ನಡದ ಚೋಮನ ದುಡಿ ಕಾದಂಬರಿ ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ ಸಮಾಜದಲ್ಲಿನ ಹಿಂದುಳಿದವರ ಬದುಕಿನ ನೈಜ ಚಿತ್ರಣವಾಗಿದೆ. ಚೋಮನ ಜೀವನದ ಮೂಲಕ ಬಡತನ ಜಾತಿ ಸಮಸ್ಯೆಗಳನ್ನು ಲೇಖಕರು ಮನಮುಟ್ಟುವ ರೀತಿಯನ್ನು ಚಿತ್ರಿಸಿದ್ದಾರೆ. ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಧೈರ್ಯ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. ಸ್ಪರ್ಧಾತ್ಮಕ ಪರಿಕ್ಷೇಗಳಲ್ಲಿ ಯಶಸ್ಸು ಸಾಧಿಸಲು ನಿರಂತರ ಓದು, ಪರಿಶ್ರಮ ಮತ್ತು ಸಮಯ ಅಗತ್ಯ ಎಂದರು. ಕನ್ನಡ ವಿಭಾಗದ ಉಪನ್ಯಾಸಕರಾದ ಪೂರ್ಣಿಮಾ, ಕಾಂತರಾಜು ಇತರರಿದ್ದರು.