ಶ್ರವಣಬೆಳಗೊಳದಲ್ಲಿ ನೇಮಿನಾಥ ತೀಥರ್ಂಕರರ ರಥೋತ್ಸವ ಸಂಭ್ರಮದಿಂದ ಜರುಗಿತು.
ಚನ್ನರಾಯಪಟ್ಟಣ (ಶ್ರವಣಬೆಳಗೊಳ): ಕ್ಷೇತ್ರದಲ್ಲಿ ಭಗವಾನ್ ನೇಮಿನಾಥ ತೀರ್ಥಂಕರರ ವಾರ್ಷಿಕ ಪಂಚಕಲ್ಯಾಣ ಮಹಾರಥೋತ್ಸವ ನಿಮಿತ್ತ ನೇಮಿನಾಥ ತೀಥರ್ಂಕರ, ಕ್ಷೇತ್ರದ ಅಧಿದೇವತೆ ಯಕ್ಷಿ ಕೂಷ್ಮಾಂಡಿನಿ ದೇವಿಯ ಮಹಾರಥೋತ್ಸವವು ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಗುರುವಾರ ಅದ್ದೂರಿಯಾಗಿ ನೆರವೇರಿತು.
ರಥಯಾತ್ರೆಗೂ ಮುನ್ನ ಶ್ರೀಗಳು ಹೊರ ವಲಯದಲ್ಲಿರುವ ಮೂಲ ಸ್ಥಾನ ಜಕ್ಕಳಮ್ಮ ದೇವಿಯ ಸನ್ನಿಧಿ, ಕ್ಷೇತ್ರಪಾಲ ಬ್ರಹ್ಮದೇವರಿಗೆ ಪೂಜೆ ಸಲ್ಲಿಸಿ ಜೈನ ಮಠದಲ್ಲಿರುವ ಕೂಷ್ಮಾಂಡಿನಿ ದೇವಿಗೆ ಮಂಗಳಾರತಿ ಮಾಡಲಾಯಿತು. ಹುಳ್ಳ ಸಭಾ ಮಂಟಪದಲ್ಲಿ ನೇಮಿನಾಥ ಸ್ವಾಮಿ ಯಕ್ಷಿ ಕೂಷ್ಮಾಂಡಿನಿ ದೇವಿ ಹಾಗೂ ಸರ್ವಾಹ್ಣ ಯಕ್ಷರಿಗೆ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು. ಜೈನಮಠದ ಮುಂಭಾಗದಲ್ಲಿ ಸಿದ್ಧಗೊಂಡಿದ್ದ ದೊಡ್ಡ ರಥಕ್ಕೆ ಉತ್ಸವ ತೀಥರ್ಂಕರರನ್ನು ಮತ್ತು ದೇವಿಯನ್ನು ವಿವಿಧ ಮಂಗಲ ವಾದ್ಯಗಳೊಂದಿಗೆ ಆಹ್ವಾನಿಸಿ ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ರಥ ನಿರ್ವಾಹಕರು, ಸೇವಾಕರ್ತರು, ಎಲ್ಲ ಇಲಾಖೆಗಳ ಮುಖ್ಯಸ್ಥರು, ಗಣ್ಯರನ್ನು ಮಂಗಲಾಕ್ಷತೆಯ ಶ್ರೀಫಲಗಳೊಂದಿಗೆ ಚಾರುಕೀರ್ತಿ ಶ್ರೀಗಳು ಗೌರವಿಸಿದರು.
ಮಹಾರಥಕ್ಕೆ ಪೂಜೆ ಸಲ್ಲಿಸಿದ ಶ್ರೀಗಳು ಈಡುಗಾಯಿ ಒಡೆದ ನಂತರ ಮೆರವಣಿಗೆಗೆ ಚಾಲನೆ ನೀಡುತ್ತಿದ್ದಂತೆ ಭಕ್ತರು ತೇರು ಎಳೆದರು. ನಗಾರಿ ವಾದನ, ವಿವಿಧ ಮಂಗಲ ವಾದ್ಯಗಳು ಗಂಟಾನಾದ, ಮೈಸೂರು ಬ್ಯಾಂಡ್ ವಾದನ, ಚಂಡೆವಾದ್ಯ, ಮಹಾರಾಷ್ಟ್ರದ ಝುಂ ಝುಂ ಪಥಕ, ಸ್ಥಳೀಯರ ಬ್ಯಾಂಡ್ ವಾದನ ಮೊಳಗಿದವು. ಅಹಿಂಸಾ ಪರಮೋ ಧರ್ಮ ಪ್ರಭಾವಳಿಯೊಂದಿಗೆ ಮೆರವಣಿಗೆ ಸಾಗುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಹೂ, ದವನ ಸಹಿತ ರಥಕ್ಕೆ ಪೂಜೆ ಸಲ್ಲಿಸಿದರು.
ಪೂಜೆಯ ನೇತೃತ್ವವನ್ನು ನಂದಕುಮಾರ್ ಶಾಸ್ತ್ರಿ, ಪ್ರೇಮ್ ಕುಮಾರ್, ಜಿನೇಶ್ ಕುಮಾರ್, ಜೀವೇಂದ್ರ ಕುಮಾರ್ ಶಾಸ್ತ್ರಿ, ಅನೂಪ್, ಸನ್ಮತಿ, ವಿಹಾರ್ ವಹಿಸಿದ್ದರು. ಆಚಾರ್ಯ ಅನೇಕಾಂತ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ಭಾಗಿಯಾಗಿದ್ದರು. ಸಾರ್ವಜನಿಕರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಪಾನಕ ಮತ್ತು ಮಜ್ಜಿಗೆ ವ್ಯವಸ್ಥೆಯನ್ನು ಶ್ರವಣಬೆಳಗೊದ ಜಿ.ಸಿ.ಮಾಣಿಕ್ ಚಂದ್ರಯ್ಯ ಮತ್ತು ಕುಟುಂಬ ವರ್ಗದವರು ವಹಿಸಿದ್ದರು. ರಥ ಸಾಗುವ ಭಂಡಾರ ಬಸದಿಯ ಸುತ್ತಮುತ್ತಲಿನ ಭಕ್ತರು ಸಾರ್ವಜನಿಕರಿಗೆ ನೀರು, ಮಜ್ಜಿಗೆ, ತಂಪು ಪಾನೀಯ ವ್ಯವಸ್ಥೆ ಮಾಡಿದ್ದರು.
ಶಾಸಕ ಸಿ.ಎನ್.ಬಾಲಕೃಷ್ಣ ರಥೋತ್ಸವದಲ್ಲಿ ಭಾಗವಹಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು. ಶಾಸಕರು ವೈಯಕ್ತಿಕವಾಗಿ ಕ್ಷೇತ್ರಕ್ಕೆ ಆಗಮಿಸಿದ್ದ ಜನತೆಗೆ ಉಚಿತವಾಗಿ 15ಸಾವಿರ ಲೀಟರ್ ಶುದ್ಧ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಕಲ್ಪಿಸಿದ್ದರು. ಶಾಸಕ ಸ್ವರೂಪ್ ಪ್ರಕಾಶ್, ವಿಧಾನ ಪರಿಷತ್ ಸದಸ್ಯ ವಿವೇಕಾನಂದ, ಗೀತಾ ಗೋಪಾಲಸ್ವಾಮಿ ಇದ್ದರು.
ಜಾತ್ರಾ ಮಹೋತ್ಸವ ಪ್ರಯುಕ್ತ ಬುಧವಾರ ರಾತ್ರಿ 24 ತೀಥರ್ಂಕರರ ಯಕ್ಷ ಯಕ್ಷಿಯರ ಸರ್ವಾಹ್ಣ ಯಕ್ಷರ ಮತ್ತು ಬಾಹುಬಲಿ ಸ್ವಾಮಿಯ ಪಲ್ಲಕ್ಕಿ ಮೆರವಣಿಗೆ ಭಂಡಾರ ಬಸದಿಯ ಸುತ್ತಾ ನೆರವೇರಿತು. ಆಚಾರ್ಯ ಅನೇಕಾಂತ ಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು, ಚಾರುಕೀರ್ತಿ ಶ್ರೀಗಳು ಭಾಗವಹಿಸಿದ್ದರು. ವಿಂಧ್ಯಗಿರಿಯ ಬಾಹುಬಲಿ ಬೆಟ್ಟ ಮಹಾದ್ವಾರ, ಜೈನಮಠದ ರಸ್ತೆ, ಕಲ್ಯಾಣಿರಸ್ತೆ, ಚಿಕ್ಕದೇವರಾಜ ಒಡೆಯರ ಕಲ್ಯಾಣಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.