ಅರಕಲಗೂಡು ತಾಲೂಕು ಕಚೇರಿ ಸಭಾಂಗಣದಲ್ಲಿ ಕುಸುಮ್ ಬಿ ಯೋಜನೆಯಡಿ ರೈತರ ಪಂಪ್ ಸೆಟ್‌ಗಳಿಗೆ ಸೋಲಾರ್ ಅಳವಡಿಕೆ ಸಂಬಂಧ ನಡೆದ ಸಭೆಯಲ್ಲಿ ಶಾಸಕ ಎ. ಮಂಜು ಮಾತನಾಡಿದರು. ಕೆ.ಸಿ. ಸೌಮ್ಯಾ, ಸೋಮಶೇಖರ್ ಇತರರಿದ್ದರು.
ಅರಕಲಗೂಡು : ಕುಸುಮ್ ಬಿ ಯೋಜನೆಯಡಿ ರೈತರ ಪಂಪ್‌ಸೆಟ್‌ಗಳಿಗೆ ಕಾಲಮಿತಿ ಮೀರಿದರೂ ಸೋಲಾರ್ ಅಳವಡಿಸದೆ ನಿರ್ಲಕ್ಷ್ಯಿಸಿರುವ ಗುತ್ತಿಗೆದಾರ ಕಂಪನಿಗಳ ವಿರುದ್ಧ ಶಾಸಕ ಎ.ಮಂಜು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಕಂಪನಿಗಳ ಮೇಲ್ವಿಚಾರಕರು ಮತ್ತು ಸೆಸ್ಕ್ ಇಂಜಿನಿಯರ್‌ಗಳ ಸಭೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 507 ರೈತರಿಗೆ ಸೋಲಾರ್ ಅಳವಡಿಸಬೇಕಿದೆ. ಗುತ್ತಿಗೆ ಪಡೆದ ಕಂಪನಿಗಳು ಉಪ ಗುತ್ತಿಗೆ ನೀಡಿದ್ದು ಇವರು ಸೋಲಾರ್ ಅಳವಡಿಕೆ ಮಾಡದೆ ಇಲ್ಲಸಲ್ಲದ ಸಬೂಬು ಹೇಳಿಕೊಂಡು ರೈತರನ್ನು ವಿನಾಕಾರಣ ಅಲೆದಾಡಿಸುತ್ತಿದ್ದಾರೆ. ರೈತರ ಕೆಲಸ ಮಾಡಿಕೊಡುವಲ್ಲಿ ಬೇಜವಾಬ್ದಾರಿ ವಹಿಸಲಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.
ಸಭೆಗೆ ಕಂಪನಿಗಳ ಮಾಲೀಕರು ಗೈರಾಗಿದ್ದು ಮೇಲ್ವಿಚಾರಕರನ್ನು ಕಳುಹಿಸಿದ್ದಾರೆ. ಹೀಗಾಗಿ ಏ.13ರಂದು ಮರು ಸಭೆ ಕರೆಯಲಾಗಿದ್ದು ಸೋಲಾರ್ ಅಳವಡಿಕೆಗೆ ನೋಂದಣಿಯಾದ ಎಲ್ಲ ರೈತರು ಹಾಜರಾಗಬೇಕು ಎಂದರು.
ಸಭೆಯಲ್ಲಿ ಭಾಗವಹಿಸಿದ್ದ ರೈತರು ಸೋಲಾರ್ ಅಳವಡಿಸದೆ ಸತಾಯಿಸುತ್ತಿರುವ ಉಪ ಕಂಪನಿಗಳ ಬೇಜವಾಬ್ದಾರಿಯನ್ನು ಖಂಡಿಸಿದರು.
ತಹಸೀಲ್ದಾರ್ ಕೆ.ಸಿ. ಸೌಮ್ಯಾ, ಶಿರಸ್ತೇದಾರ್ ಸೋಮಶೇಖರ್, ಸೆಸ್ಕ್ ಇಂಜಿನಿಯರ್ ಚಿದಂಬರಂ, ಮೋಹನ್, ಚಿನ್ನಸ್ವಾಮಿ ಇದ್ದರು.