ಹಳೇಬೀಡು ಸಮೀಪದ ಪುಷ್ಪಗಿರಿ ಮಠದ ಆವರಣದಲ್ಲಿ ಶನಿವಾರ ಆರಂಭವಾದ ನೈಸರ್ಗಿಕ ಪದ್ಧತಿ ಕೃಷಿ ಕಾರ್ಯಾಗಾರಕ್ಕೆ ಡಾ. ಸುಭಾಷ್ ಪಾಳೇಕರ್ ಚಾಲನೆ ನೀಡಿದರು. ಪುಷ್ಪಗಿರಿ ಶ್ರೀಗಳು, ಶಾಸಕ ಎಚ್.ಕೆ.ಸುರೇಶ್, ಮುಖಂಡ ಎಸ್.ಎಚ್.ರಾಜಶೇಖರ್ ಇತರರಿದ್ದರು.
- ಖ್ಯಾತ ಕೃಷಿ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ.ಸುಭಾಷ್ ಪಾಳೇಕರ್
- ಪುಷ್ಪಗಿರಿ ಮಠದ ಕಲಾಮಂದಿರ
ಹಳೇಬೀಡು: ಇಂದಿಗೂ ನಮ್ಮಲ್ಲಿ ದಟ್ಟವಾದ ಪಶ್ಚಿಮಘಟ್ಟ ಅರಣ್ಯಪ್ರದೇಶಗಳು ಉಳಿದಿರುವುದು ಪ್ರಾಕೃತಿಕ ಚೈತನ್ಯದಿಂದಲೇ ಹೊರತು ಮಾನವ ಶ್ರಮದಿಂದ ಅಲ್ಲ ಎಂದು ಖ್ಯಾತ ಕೃಷಿ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ.ಸುಭಾಷ್ ಪಾಳೇಕರ್ ಅಭಿಪ್ರಾಯಪಟ್ಟರು.
ಸಮೀಪದ ಪುಷ್ಪಗಿರಿ ಮಠದ ಕಲಾಮಂದಿರದಲ್ಲಿ ಶನಿವಾರ ಆರಂಭವಾದ ನೈಸರ್ಗಿಕ ಕೃಷಿ ಪದ್ಧತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಡಿನಲ್ಲಿ ಹುಲುಸಾಗಿ ಬೆಳೆಯುವ ಹಲಸು, ಹೊನ್ನೆ, ನಂದಿ, ದೇವದಾರು ಮರಗಳಿಗೆ ಯಾರೂ ಗೊಬ್ಬರ ಹಾಕಿ ಪೋಷಿಸಿರುವುದಿಲ್ಲ. ನೈಸರ್ಗಿಕ ಸಂಪನ್ಮೂಲಗಳಿಂದ ಬೆಳೆಯುವ ಔಷಧ ಸಸ್ಯಗಳು, ನೂರಾರು ವರ್ಷ ಬದುಕುಳಿಯುವ ಮರಗಳಿಗೆ ಒಮ್ಮೆಯೂ ಕೀಟನಾಶಕ ಸಿಂಪಡಿಸಿರುವುದಿಲ್ಲ ಎಂದರು.
ಅರಣ್ಯ ಪ್ರದೇಶದಲ್ಲಿ ಸ್ವಾಭಾವಿಕವಾಗಿ ನೂರಾರು ಜಾತಿಯ ಗಿಡ ಮರಗಳು ಹುಲುಸಾಗಿ ಬೆಳೆಯುತ್ತವೆ. ಅದೇ ಮಾದರಿಯನ್ನು ರೈತರು ಕೃಷಿಯಲ್ಲೂ ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ನಮ್ಮ ತಂಡ ಅರಣ್ಯ ಪ್ರದೇಶಕ್ಕೆ ತೆರಳಿ ವಾಸ್ತವ್ಯವಿದ್ದು ಅಧ್ಯಯನ ನಡೆಸುತ್ತಿದೆ. ನೈಸರ್ಗಿಕ ಕೃಷಿ ಪದ್ಧತಿಗೆ ರಚನಾತ್ಮಕ ಯೋಜನೆಯನ್ನೂ ರೂಪಿಸಿದೆ. ರೈತರು ಇಲ್ಲಿ ನಡೆಯುವ ಮೂರು ದಿನಗಳ ಕಾರ್ಯಾಗಾರದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಶೂನ್ಯ ಬಂಡವಾಳದಿಂದ ಕೃಷಿಯನ್ನು ಮುನ್ನಡೆಸುವ ವಿಧಾನವನ್ನು ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ನೈಸರ್ಗಿಕ ಕೃಷಿಯಲ್ಲಿ ಯಶಸ್ವಿಯಾಗಿರುವ ಡಾ.ಸುಭಾಷ್ ಪಾಳೇಕರ್ ಅವರನ್ನು ಮಠಕ್ಕೆ ಕರೆಸಿ ಈ ಭಾಗದ ರೈತರಿಗೆ ಕೃಷಿ ಪದ್ಧತಿಯನ್ನು ಪರಿಚಯಿಸಬೇಕೆಂಬ ಹಂಬಲವಿತ್ತು. ಇಂದು ಸಾವಿರಾರು ರೈತರ ಸಮ್ಮುಖದಲ್ಲಿ ದೊಡ್ಡ ಕಾರ್ಯಾಗಾರವನ್ನೇ ನಡೆಸುವ ಅವಕಾಶ ಸಿಕ್ಕಿದೆ. ಬಹುಕಾಲ ನೀರಾವರಿ ತೊಂದರೆ ಅನುಭವಿಸಿದ ಈ ಭಾಗದ ರೈತರಿಗೆ ನೈಸರ್ಗಿಕ ಕೃಷಿ ವಿಧಾನ ಉಪಯುಕ್ತವಾಗುತ್ತದೆ ಎಂದರು.
ನಾಟಿ ಹಸುವಿನ ಗಂಜಲ, ಸಗಣಿಯಿಂದ ತಯಾರಾಗುವ ಬೀಜಾಮೃತ ಹಾಗೂ ಜೀವಾಮೃತ ಉತ್ಪನ್ನಗಳನ್ನು ಬಳಸಿ ಬೆಳೆಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದು ಉತ್ತಮ ವಿಧಾನವಾಗಿದೆ. ಮೂರು ದಿನಗಳ ಕಾರ್ಯಾಗಾರದಲ್ಲಿ ಈ ಬಗ್ಗೆ ಸಮಗ್ರ ಮಾಹಿತಿಯನ್ನು ಸುಭಾಷ್ ಪಾಳೇಕರ್ ನೀಡಲಿದ್ದಾರೆ ಎಂದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಕಾರ್ಯಾಗಾರದ ಜತೆಗೆ ವಿವಿಧ ಮೇಳಗಳನ್ನು ಆಯೋಜಿಸಿರುವುದು ರೈತರಿಗೆ ಉಪಯುಕ್ತವಾಗಿದೆ. ಇದಕ್ಕಾಗಿ ಮೂರು ತಿಂಗಳಿನಿಂದ ಅವಿರತವಾಗಿ ಶ್ರಮಿಸಿ ಇಂದು ಕಾರ್ಯಕ್ರಮದ ಸಾಕಾರಕ್ಕೆ ಕಾರಣವಾಗಿರುವ ಪುಷ್ಪಗಿರಿಶ್ರೀಗಳು ಅಭಿನಂದನಾರ್ಹರು ಎಂದರು.
ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿದರು. ವಿವಿಧ ಜಿಲ್ಲೆಯ ರೈತ ಮುಖಂಡರು, ರೈತ ಮಹಿಳಾ ಸಾಧಕಿಯರು ಇದ್ದರು.
ಗಮನ ಸೆಳೆಯುತ್ತಿದೆ ದೇಸಿ ತಳಿಗಳ ಬೀಜ ಮೇಳ: ಮೂರು ದಿನಗಳ ಕಾಲ ನಡೆಯಲಿರುವ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ದೇಸಿ ತಳಿಗಳ ಬೀಜಮೇಳ, ಮೌಲ್ಯವರ್ಧಿತ ಆಹಾರ ಬೆಳೆಗಳ ಪ್ರದರ್ಶನ ಹಾಗೂ ನೈಸರ್ಗಿಕ ವಿಧಾನದಲ್ಲಿ ರೈತ ಕುಟುಂಬದವರು ತಯಾರಿಸಿರುವ ವಿವಿಧ ಕೃಷಿ ಹಾಗೂ ಗೃಹ ಬಳಕೆ ಉತ್ಪನ್ನಗಳ ಪ್ರದರ್ಶನ ಎಲ್ಲರ ಗಮನ ಸೆಳೆಯಲಿದೆ.
ಕೃಷಿ ಉತ್ಪನ್ನಗಳಲ್ಲದೆ ಮನೆಯಲ್ಲಿ ಉಪಯೋಗಿಸುವ ಸೋಪು, ಶಾಂಪೂ, ಹ್ಯಾಂಡ್‌ವಾಷ್, ಅಗರಬತ್ತಿಗಳ ಪ್ರದರ್ಶನ ಹಾಗೂ ನೇರ ಮಾರಾಟದ ಸೌಲಭ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಪ್ರದರ್ಶನಕ್ಕಿಟ್ಟಿರುವ ಎಲ್ಲ ವಸ್ತುಗಳನ್ನೂ ಬಹುತೇಕ ಗೋವಿನ ಉತ್ಪನ್ನಗಳಿಂದಲೇ ತಯಾರಿಸಿರುವುದು ವಿಶೇಷವಾಗಿದೆ. ಶುದ್ಧೀಕರಿಸಿದ ಗೋಮೂತ್ರ ಹಾಗೂ ಸಸಿಗಳ ಆರೈಕೆಗೆ ಬಳಸುವ ಜೀವಾಮೃತ ಉತ್ಪನ್ನದ ಮಾರಾಟ ಜೋರಾಗಿತ್ತು. ಇದಲ್ಲದೆ, ಮೂರು ದಿನಗಳ ಕಾಲ ನಡೆಯುವ ಕೃಷಿ ಮೇಳಕ್ಕೆ ಆಗಮಿಸುವ ನೂರಾರು ರೈತರ ಯೋಗಕ್ಷೇಮಕ್ಕಾಗಿ ತಾತ್ಕಾಲಿಕ ಆರೋಗ್ಯ ಕೇಂದ್ರವನ್ನೂ ತೆರೆಯಲಾಗಿದೆ.