ಶ್ರವಣಬೆಳಗೊಳದ ಶ್ರೀ ಅಂಬಿಕಾ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲ ಶಿವಣ್ಣ ಉದ್ಘಾಟಿಸಿದರು. ಸರೋಜಾ, ಕೆ.ಎಸ್.ಅನಂತಸ್ವಾಮಿ, ಉದಯಕುಮಾರ್, ಬಬನ್ ಪಿ.ದತ್ತವಾಡೆ ಇದ್ದರು. 
ಹಾಸನ

ಸಮಯ ಸದ್ಬಳಕೆಯಾದರೆ ಸಾಧನೆ ಖಚಿತ

ಶ್ರವಣಬೆಳಗೊಳ: ವಿದ್ಯಾರ್ಥಿಗಳಿಗೆ ಓದುವ ಹಂಬಲ ಹಾಗೂ ಸಾಧಿಸುವ ಛಲ ಇರಬೇಕು. ತಮಗೆ ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಂಡು ಸದಾ ಚಟುವಟಿಕೆಯಿಂದ ತೊಡಗಿಸಿಕೊಂಡರೆ ಸಾಧನೆ ಮಾಡಲು ಸಾಧ್ಯ ಎಂದು ನಿವೃತ್ತ ಪ್ರಾಂಶುಪಾಲ ಶಿವಣ್ಣ ಹೇಳಿದರು.
ಪಟ್ಟಣದ ಶ್ರೀ ಅಂಬಿಕಾ ಶಾಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನ ನಮ್ಮದು, ತಂದೆ-ತಾಯಿಗಳು ಹಾಗೂ ಗುರು-ಹಿರಿಯರ ಆಶೀರ್ವಾದ ನಮಗಿದೆ. ದೇವರು ನನ್ನೊಂದಿಗೆ ಇದ್ದಾನೆ. ನಾನು ಸಾಧನೆ ಮಾಡುತ್ತೇನೆ ಎಂಬ ತತ್ವಗಳನ್ನು ರೂಢಿಸಿಕೊಂಡರೆ ಏನನ್ನಾದರೂ ಸಾದಿಸಬಹುದು ಎಂದರು.
ಮುಖ್ಯ ಶಿಕ್ಷಕಿ ಸರೋಜಾ ಮಾತನಾಡಿ, ಮಕ್ಕಳು ಮೊಬೈಲ್ ಹಾಗೂ ಟಿವಿಗೆ ದಾಸರಾಗದೆ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಮನೆಯಲ್ಲೇ ದೊರಕುವ ವಸ್ತುಗಳಿಂದ ವಿಜ್ಞಾನದ ಆವಿಷ್ಕಾರಗಳನ್ನು ಮಾಡುವ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನವೋದಯ ಅನುದಾನಿತ ಪ್ರೌಢಶಾಲೆ ವಿಜ್ಞಾನ ಶಿಕ್ಷಕ ಕೆ.ಎಸ್.ಅನಂತಸ್ವಾಮಿ ಮಾತನಾಡಿದರು. ವಿದ್ಯಾರ್ಥಿಗಳು ಹೃದಯ, ಮೂತ್ರಪಿಂಡ, ಹಸಿರುಮನೆ ಪರಿಣಾಮ, ಜೆಸಿಬಿ, ಜಲಚಕ್ರ, ರೋಬಾಟಿಕ್, ಗಗನಯಾತ್ರಿ, ಮಳೆಕೊಯ್ಲು ಸೇರಿದಂತೆ 60 ಕ್ಕೂ ಹೆಚ್ಚು ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶಿಸಿದರು. ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಬಾಹುಬಲಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಉದಯಕುಮಾರ್ ಇರ್ವತ್ತೂರು, ಕಾರ್ಯದರ್ಶಿ ಬಬನ್ ಪಿ.ದತ್ತವಾಡೆ, ಶಿಕ್ಷಕರಾದ ಬಾಹುಬಲಿ, ರಮ್ಯಾ, ಪವಿತ್ರಾ, ಪದ್ಮರಾಜ್, ಶ್ರೀಧರ್, ದಿವ್ಯಾ, ಪ್ರೇಮ ಪ್ರಶಾಂತ್, ಮನು ಜೈನ್ ಉಪಸ್ಥಿತರಿದ್ದರು.