ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಶಾಸಕ ಸಿ.ಎನ್.ಬಾಲಕೃಷ್ಣ ಚಾಲನೆ ನೀಡಿದರು, ಬಿ.ಆರ್.ಯುವರಾಜ್, ಜಿ.ಎಸ್.ಶಂಕರಪ್ಪ, ವೆಂಕಟೇಶ್, ಅನಿಲ್, ಜ್ಯೋತಿ ಶ್ರೀನಿವಾಸ್ ಭಾಗವಹಿಸಿದ್ದರು.
ಚನ್ನರಾಯಪಟ್ಟಣ: ಲಸಿಕೆ ಹಾಕಿಸುವುದರ ಮೂಲಕ ಭಾರತವನ್ನು ಪೋಲಿಯೋ ಮುಕ್ತವಾಗಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಭಾನುವಾರ ತಾಲೂಕು ಆಡಳಿತ, ತಾಲೂಕು ವೈದ್ಯಾಧಿಕಾರಿಗಳ ಕಚೇರಿ, ಸಾರ್ವಜನಿಕ ಆಸ್ಪತ್ರೆ, ಲಯನ್ಸ್ ಸೇವಾ ಸಂಸ್ಥೆ, ರೋಟರಿ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಪೋಲಿಯೋ ಮುಕ್ತವಾಗಿದೆ. ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಿಸಬೇಕು. ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು. ನಗರ ಪ್ರದೇಶದಲ್ಲಿ 2,335 ಹಾಗೂ ಗ್ರಾಮೀಣ ಪ್ರದೇಶದಲ್ಲಿ 11,820 ಸೇರಿ ಒಟ್ಟು 14,155 ಮಕ್ಕಳನ್ನು ಗುರುತಿಸಲಾಗಿದ್ದು, ತಾಲೂಕಿನಾದ್ಯಂತ ಒಟ್ಟು 133 ಬೂತ್‌ಗಳನ್ನು ಸ್ಥಾಪಿಸಲಾಗಿದೆ. 4 ಟ್ರಾನ್ಸಿಸ್ ತಂಡ , 1 ಮೊಬೈಲ್ ತಂಡ ಕಾರ್ಯನಿರ್ವಹಿಸಲಿವೆ. 542 ಸಿಬ್ಬಂದಿ ಮತ್ತು 26 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ವಾರದಲ್ಲಿ ಒಂದು ದಿನ ಸ್ಕ್ಯಾನಿಂಗ್ ಪರೀಕ್ಷೆ ಲಭ್ಯವಿದ್ದು ವಾರದಲ್ಲಿ ಮೂರು ದಿನಗಳಿಗೆ ವಿಸ್ತರಿಸಲು ಜಿಲ್ಲಾ ಆರೋಗ್ಯಾಧಿಕಾರಿಯೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು. ತಾಲೂಕು ಆಸ್ಪತ್ರೆಯಲ್ಲಿ ಎಲ್ಲ ವಿಭಾಗದಲ್ಲೂ ತಜ್ಞ ವೈದ್ಯರಿದ್ದು ರೆಡಿಯಾಲಜಿಸ್ಟ್ ವಿಭಾಗಕ್ಕೆ ವೈದ್ಯರ ಅವಶ್ಯಕತೆ ಇದೆ. ಆರೋಗ್ಯ ಸಚಿವರ ಗಮನಕ್ಕೆ ತಂದು ಮುಂದಿನ ದಿನಗಳಲ್ಲಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ತಾಯಿ ಮಗು ಆಸ್ಪತ್ರೆ ತೆರೆಯಲು ಹಲವಾರು ಬಾರಿ ಮನವಿ ಸಲ್ಲಿಸಿದ್ದು ಹೆಚ್ಚುವರಿಯಾಗಿ ಪ್ರಸೂತಿ ತಜ್ಞರು ಹಾಗೂ ಅನಸ್ತೇಶಿಯ ತಜ್ಞರ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ. ಸರ್ಕಾರದಿಂದ ವೃದ್ಧರು, ಅವಿವಾಹಿತರು, ಅಂಗವಿಕಲರು, ನಿರಾಶ್ರಿತರು ಇತರೆ ಸೌಲಭ್ಯಕ್ಕಾಗಿ ಮಾಸಾಶನ ಪಡೆಯಲು ಸಂಧ್ಯಾ ಸುರಕ್ಷಾ ಯೋಜನೆ, ವಿಶೇಷ ಚೇತನರ ದೃಢೀಕರಣ ಪತ್ರ ಹಾಗೂ ವಯಸ್ಸಿನ ದೃಢೀಕರಣ ಪತ್ರದ ದೃಢೀಕರಣವನ್ನು ಪ್ರತಿ ಬುಧವಾರ ತಾಲೂಕು ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆಸಿಕೊಳ್ಳಬೇಕು. ಕಿದ್ವಾಯಿ ಗ್ರಂಥಿ ಆಸ್ಪತ್ರೆ ಹಾಗೂ ಜಯದೇವ ಆಸ್ಪತ್ರೆ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ರೋಗಿಗಳಿಗೆ ವರದಾನವಾಗಿದೆ. ತಾಲೂಕಿನಲ್ಲಿ ಕ್ಯಾನ್ಸರ್ ಹಾಗೂ ಹೃದಯ ಸಂಬಂಧ ಕಾಯಿಲೆಗಳಿರುವ ರೋಗಿಗಳು ತಮ್ಮನ್ನು ಸಂಪರ್ಕಿಸಿದರೆ ಎರಡು ಆಸ್ಪತ್ರೆಗಳಿಗೂ ಶಿಫಾರಸು ಮಾಡಿ ಚಿಕಿತ್ಸೆಗೆ ನೆರವು ನೀಡಲಾಗುವುದು. ಸಾರ್ವಜನಿಕರು ಆದಷ್ಟು ಆರೋಗ್ಯ ವಿಮೆ ಮಾಡಿಸಿಕೊಂಡರೆ ಕಷ್ಟ ಕಾಲದಲ್ಲಿ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಬಿ.ಆರ್.ಯುವರಾಜ್, ತಹಸೀಲ್ದಾರ್ ಜಿ.ಎಸ್.ಶಂಕರಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ.ಪಿ.ತೇಜಸ್ವಿನಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅನಿತಾ, ಪುರಸಭೆ ಮುಖ್ಯ ಅಧಿಕಾರಿ ಆರ್.ಯತೀಶ್ ಕುಮಾರ್, ಟಿಪಿಸಿಎಂಎಸ್ ಅಧ್ಯಕ್ಷ ವೆಂಕಟೇಶ್, ನಿರ್ದೇಶಕ ಅನಿಲ್ ಮರಗೂರು, ರೋಟರಿ ಸಂಸ್ಥೆಯ ಜ್ಯೋತಿ ಶ್ರೀನಿವಾಸ್, ಹೇಮಚಂದ್ರ, ಡಿ.ಕೆ.ಹರೀಶ್, ಲಯನ್ಸ್ ಸೇವಾ ಸಂಸ್ಥೆಯ ಗೋವಿಂದರಾಜು, ಡಿ.ಕೆ.ಮಂಜುನಾಥ್, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಬಾಲು ನಾಗಸಮುದ್ರ, ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು.
ತಾಲೂಕಿನಲ್ಲಿ ಔಷಧ ಪರವಾನಗಿ ಇಲ್ಲದೆ ಅನಧಿಕೃತವಾಗಿ ಔಷಧ ಅಂಗಡಿಗಳನ್ನು ನಡೆಸುತ್ತಿರುವುದು ಹಾಗೂ ಅನಧಿಕೃತ ಔಷಧಿಗಳನ್ನು ಮಾರಾಟ ಮಾಡುವುದು ಕಂಡು ಬಂದಿದೆ. ಅಂತಹವರ ವಿರುದ್ಧ ತಾಲೂಕು ಆಡಳಿತ, ಜಿಲ್ಲಾ ಆರೋಗ್ಯಾಅಧಿಕಾರಿ ತಹಸೀಲ್ದಾರ್ ಅವರಿಗೆ ಮಾಹಿತಿ ನೀಡಿದರೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು.