ಹಳೇಬೀಡಿನ ಹೊಯ್ಸಳೇಶ್ವರ ದೇಗುಲ ಆವರಣದಲ್ಲಿ ಅಂತಾರಾಷ್ಟ್ರೀಯ ಸಂಗ್ರಹಾಲಯಗಳ ದಿನಾಚರಣೆ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ಕರ್ನಾಟಕದ ಸಂಗ್ರಹಾಲಯಗಳ ಇತಿಹಾಸ ಸಾರುವ ಛಾಯಚಿತ್ರ ಪ್ರದರ್ಶವನ್ನು ಸಾರ್ವಜನಿಕರು ಹಾಗೂ ವಿದ್ಯಾರ್ಥಇಗಳು ವೀಕ್ಷಿಸಿದರು. 
ಹಾಸನ

ನಾಗರಿಕತೆಯ ಆಧಾರದಲ್ಲಿ ಒಗ್ಗೂಡಿಸುವ ಪ್ರಯತ್ನ

ಹಳೇಬೀಡು : ವಸ್ತುಸಂಗ್ರಹಾಲಗಳು ಎಂದರೆ ಕೇವಲ ಪಳೆಯುಳಿಕೆಗಳನ್ನು ಇಟ್ಟಿರುವ ಸ್ಥಳ ಎಂಬ ಸಾಮಾನ್ಯ ಗ್ರಹಿಕೆ ಜನರಲ್ಲಿದೆ. ಆದರೆ, ಪ್ರಪಂಚದಲ್ಲಿರುವ ಸಾವಿರಾರು ಸಂಗ್ರಹಾಲಯಗಳು ಬಿಲಿಯನ್ ವರ್ಷಗಳ ಹಿಂದಿನ ಇತಿಹಾಸವನ್ನು ಸಾರುವ ಮತ್ತು ಖಂಡಗಳಾಗಿ ವಿಭಜನೆಯಾಗಿರುವ ಜಗತ್ತನ್ನು ನಾಗರಿಕತೆಯ ಆಧಾರದಲ್ಲಿ ಒಗ್ಗೂಡಿಸುವ ಪ್ರಯತ್ನದ ಭಾಗವಾಗಿದೆ ಎಂದು ಪಡುವಲಹಿಪ್ಪೆ ಗ್ರಾಮದ ದೇವೇಗೌಡ ಪ್ರಥಮದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ಡಿ. ನಾರಾಯಣ ಅಭಿಪ್ರಾಯಪಟ್ಟರು.
ಇಲ್ಲಿನ ವಿಶ್ವಪ್ರಸಿದ್ಧ ಹೊಯ್ಸಳೇಶ್ವರ ದೇಗುಲದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಂಗ್ರಹಾಲಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ವಸ್ತು ಸಂಗ್ರಹಾಲಯಗಳು ಚರಿತ್ರೆಯ ಪುನರುತ್ಥಾನಕ್ಕೆ ಕಾರಣವಾಗುತ್ತದೆ ಹಾಗೂ ಭವಿಷ್ಯದ ಪೀಳಿಗೆಗೆ ಮಾರ್ಗದರ್ಶಕವಾಗಿರುತ್ತದೆ. ವಿದೇಶದಲ್ಲಿರುವ ಸಂಗ್ರಹಾಲಯಗಳಿಗೆ ಯಾವಾಗಲೂ ಅತ್ಯುನ್ನತ ಭದ್ರತೆಯನ್ನು ನೀಡಿರುತ್ತಾರೆ. ಸಣ್ಣ ಪ್ರಾಚೀನ ಕಲಾಕೃತಿಯನ್ನೂ ಅತ್ಯಂತ ಜತನದಿಂದ ಕಾಪಾಡುತ್ತಾರೆ. ಭಾರತದಲ್ಲಿ ಪುರಾತತ್ವ ವಿಭಾಗದ ಸಂಗ್ರಹಾಲಯಗಳನ್ನು ಹೊರತುಪಡಿಸಿದರೆ, ಇತರ ಮ್ಯೂಸಿಯಂಗಳ ನಿರ್ವಹಣೆ ಕಳಪೆಯಾಗಿದೆ. ಹಾಳಾಗಿರುವ, ಹಳೆಯ ವಸ್ತುಗಳನ್ನು ನೋಡುವುದರಿಂದ ಪ್ರಯೋಜನವೇನಿದೆ ಎಂಬ ತಾತ್ಸಾರ ಮನೋಭಾವನೆಯೇ ಸಂಗ್ರಹಾಲಯಗಳ ಗುಣಮಟ್ಟ ಕುಸಿಯಲು ಕಾರಣವಾಗುತ್ತಿದೆ. ನೆದಲ್ಯಾರ್ಂಡ್ ದೇಶದಿಂದ ಭಾರತಕ್ಕೆ ಇತ್ತೀಚೆಗೆ ಹಸ್ತಾಂತರಿಸಲಾದ ಚೋಳರ ಕಾಲದ ತಾಮ್ರಪಟಗಳಲ್ಲಿ ಇತಿಹಾಸದ ಅಮೂಲ್ಯ ದಾಖಲೆಗಳಿವೆ. ಅಲ್ಲಿನ ಮ್ಯೂಸಿಯಂನಲ್ಲಿ ಅದು ಸುರಕ್ಷಿತವಾಗಿದ್ದರ ಪರಿಣಾಮ ಇಂದು ಪುನಃ ಭಾರತಕ್ಕೆ ಬರುವಂತಾಗಿದೆ. ಪ್ರಾಚೀನ ದೇಗುಲಗಳನ್ನು ಸಂದರ್ಶಿಸುವ ಪ್ರವಾಸಿಗರು ಅಲ್ಲಿನ ಸಂಗ್ರಹಾಲಯಗಳಿಗೂ ಅವಶ್ಯವಾಗಿ ಭೇಟಿ ಕೊಡಬೇಕು ಎಂದರು.
ಕೇಂದ್ರ ಪುರಾತತ್ವ ವಿಭಾಗದ ಅಧೀಕ್ಷಕ ಸುಜೀತ್ ನಯನ್ ಮಾತನಾಡಿ, ಹಾಸನ ಜಿಲ್ಲೆಯು ಹೊಯ್ಸಳ ರಾಜರ ಆಳ್ವಿಕೆಯ ಕಾಲದ ಮಹತ್ವದ ಸಂಗತಿಗಳಿಗೆ ಸಾಕ್ಷಿಯಾಗಿದೆ. ಇಲ್ಲಿನ ಪ್ರತಿಯೊಂದು ಗ್ರಾಮದಲ್ಲೂ ಶಾಸನಗಳು ದೇಗುಲಗಳು ದೊರಕುತ್ತವೆ. ಪ್ರಸ್ತುತ ಅವೆಲ್ಲವನ್ನೂ ಗುರುತಿಸಿ, ಸರ್ವೇಕ್ಷಣದ ಬಳಿಕ ಸಂರಕ್ಷಣೆ ಮಾಡುವುದು ಸವಾಲಿನ ಕೆಲಸವಾಗಿದೆ. ಭಾರತವು ಶ್ರೀಮಂತ ಪರಂಪರೆಯ ಜತೆಗೆ ಅಗಾಧ ಪ್ರಮಾಣದ ಶಿಲ್ಪ ಕಲಾಕೃತಿಗಳನ್ನು ಹೊಂದಿದೆ. ಬೇಲೂರು-ಹಳೇಬೀಡು ದೇಗುಲಗಳು ಇಡೀ ಪ್ರಪಂಚಕ್ಕೆ ನಾಗರಿಕತೆಯ ಅತ್ಯುನ್ನತ ಮಾದರಿ ಹಾಗೂ ಕಾಲಘಟ್ಟವನ್ನು ಪರಿಚಯಿಸುತ್ತದೆ. ಹಾಗೆಯೇ ಜಗತ್ತಿನಲ್ಲಿಯೇ ಹೆಚ್ಚು ಪ್ರಾಚೀನ ವಸ್ತುಗಳನ್ನು ಸಂಗ್ರಹಿಸಿರುವ ಇಂಗ್ಲೆಂಡಿನ ಆಲ್ಬರ್ಟ್ ಮತ್ತು ವಿಕ್ಟೋರಿಯಾ ಮ್ಯೂಸಿಯಂನಲ್ಲಿ ರೋಮನ್, ಗ್ರೀಕ್, ಈಜಿಫ್ಟ್ ಜತೆಗೆ ಭಾರತದ ನಾಗರಿಕತೆಯ ಅನೇಕ ಕುರುಹುಗಳನ್ನು ಸಂರಕ್ಷಿಸಿಡಲಾಗಿದೆ. ಇದರಿಂದ ನಮಗೆ ಸಂಗ್ರಹಾಯಲಗಳು ಎಚ್ಟು ಮಹತ್ವಪೂರ್ಣ ಎಂಬುದು ಅರಿವಾಗುತ್ತದೆ. ಹಳೇಬೀಡಿನಲ್ಲಿ ಆಚರಿಸುತ್ತಿರುವ ವಿಶ್ವ ಸಂಗ್ರಹಾಲಯ ದಿನದ ಪ್ರಯುಕ್ತ ಸಾರ್ವಜನಿಕ ಸಂಪರ್ಕ ಅಭಿವೃದ್ಧಿಗಾಗಿ ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿಲಾಗಿದೆ ಎಂದು ತಿಳಿಸಿದರು.
ಸಂಗ್ರಹಾಲಗಳ ಮಹತ್ವದ ಬಗ್ಗೆ ಹಳೇಬೀಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಉ ರಾಘವೇಂದ್ರ ಮಾತನಾಡಿದರು. ಶಕುಂತಲಾ ಕಾಲೇಜು ಪ್ರಾಚಾರ್ಯ ಎಂ.ಸಿ. ಕುಮಾರ್ ಮಾತನಾಡಿ ಸಂಗ್ರಹಾಲಯಗಳು ಹಾಗೂ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಸಲಹೆಗಳನ್ನು ನೀಡಿದರು. ಕಾರ್ಯಕ್ರಮದ ಪ್ರಯುಕ್ತ ಶಾಲಾ ಕಾಲೇಜು ಮಕ್ಕಳಿಗೆ ಹೊಯ್ಸಳರ ಇತಿಹಾಸವನ್ನು ಸಾರುವ ಚಿತ್ರಕಲಾ ಹಾಗೂ ಪ್ರಬಂಧ ಲೇಖನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು . ವಿಜೇತರಿಗೆ ಪುರಾತತ್ವ ವಿಭಾಗದದಿಂದ ಬಹುಮಾನ ವಿತರಿಸಲಾಯಿತು. ಕೇಂದ್ರ ಪ್ರಾಚ್ಯ ವಸ್ತು ಸಂಗ್ರಹಾಲಗಳ ಸಹಾಯಕ ಅಧೀಕ್ಷಕ ವೀರರಾಘವನ್, ಸ್ಮಾರಕ ಸಂರಕ್ಷಣಾಧಿಕಾರಿ ಸುನೀಲ್ ಹಾಗೂ ಸಿಬ್ಬಂದಿ ಇದ್ದರು.