ಹೊಳೆನರಸೀಪುರ ತಾಲೂಕಿನ ದೊಡ್ಡಕುಂಚೇವು ಗ್ರಾಮದ ಸರ್ಕಾರಿ ಸಮೂದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಯಲ್ಲಿ ಶಾಸಕ ಎಚ್.ಡಿ.ರೇವಣ್ಣ ಶಿಷ್ಟಾಚಾರ ಉಲ್ಲಂಘಿಸಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಪ್ರತಿಭಟನೆ ನಡೆಸಿದರು. 
ಹಾಸನ

ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಸದರ ಕಡೆಗಣನೆ ಆರೋಪ

ತರಾತುರಿಯಲ್ಲಿ ಎಚ್.ಡಿ.ರೇವಣ್ಣ ಉದ್ಘಾಟಿಸಿದ್ದಕ್ಕೆ ಕಾಂಗ್ರೆಸ್ಸಿಗರ ಆಕ್ರೋಶ, ಪ್ರತಿಭಟನೆ

ಹೊಳೆನರಸೀಪುರ: ತಾಲೂಕಿನ ದೊಡ್ಡಕುಂಚೇವು ಗ್ರಾಮದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರ ನೂತನ ಕಟ್ಟಡ ಉದ್ಘಾಟನೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ ಶಾಸಕ ಎಚ್.ಡಿ.ರೇವಣ್ಣ ಅವರ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿದರು.
ದೊಡ್ಡಕುಂಚೇವು ಗ್ರಾಮದ ಸಮೂದಾಯ ಆರೋಗ್ಯ ಕೇಂದ್ರದ ಮುಂದೆ ಶಾಸಕರ ನಡೆ ಖಂಡಿಸಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಘೋಷಣೆಗಳನ್ನು ಮೊಳಗಿಸಿದರು.
9.8 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ ಸಮುದಾಯ ಆರೋಗ್ಯ ಕೇಂದ್ರದ ನೂತನ ಕಟ್ಟಡದಲ್ಲಿ ಶುಕ್ರವಾರ ಮುಂಜಾನೆ ಹೋಮ, ಹವನ, ಪೂಜೆ ನೆರವೇರಿಸಿ ಟೇಪ್ ಕತ್ತರಿಸಿ ಶಾಸಕ ಎಚ್ ಡಿ ರೇವಣ್ಣ ನಿರ್ಗಮಿಸಿದ್ದರು. ಈ ಕಾರ್ಯಕ್ರಮದ ಆಯೋಜನೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ಇರಲಿಲ್ಲ. ವಿಚಾರ ತಿಳಿದು ಸ್ಥಳಕ್ಕೆ ಗ್ರಾಮಸ್ಥರು ಆಗಮಿಸುವಷ್ಟರಲ್ಲಿ ಶಾಸಕರು ಸೇರಿದಂತೆ ಜೆಡಿಎಸ್ ಮುಖಂಡರು ಕಾರ್ಯಕ್ರಮ ಮುಗಿಸಿ ತೆರಳಿದ್ದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿದರು.
ಶಿಷ್ಟಾಚಾರದಂತೆ ಸಂಸದ ಶ್ರೇಯಸ್ ಎಂ.ಪಟೇಲ್ ಅವರಿಗೆ ಆಹ್ವಾನ ನೀಡದರ ಬಗ್ಗೆ ಮತ್ತು ಗ್ರಾಮಸ್ಥರಿಗೆ ವಿಚಾರ ತಿಳಿಸಿಲ್ಲದ ಬಗ್ಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ತಾಲೂಕಿನ ಶಾಸಕರು ಸಂವಿಧಾನ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕಾನೂನು ಬಾಹಿರವಾಗಿ ಹೊಸ ಕಟ್ಟಡದ ಉದ್ಘಾಟನೆ ಮಾಡಿದ್ದಾರೆ. ಶಿಷ್ಟಾಚಾರ ಪ್ರಕಾರ ಕಾರ್ಯಕ್ರಮ ನಡೆಸದೆ ಸ್ಥಳೀಯವಾಗಿ ಯಾರನ್ನೂ ಆಹ್ವಾನಿಸದೆ ಉದ್ಘಾಟಿಸಿರುವ ಶಾಸಕರ ನಡೆಗೆ ನಮ್ಮ ಆಕ್ಷೇಪವಿದೆ. ಇದೇ ರೀತಿ ಅವರ ನಡೆ ಮುಂದುವರಿದರೆ ಶಾಸಕರ ವಿರುದ್ಧ ಹೋರಾಟವನ್ನು ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದೊಡ್ಡ ಕುಂಚೇವು ಗ್ರಾಮದ ಕಾಂಗ್ರೆಸ್ ಹಿರಿಯ ಮುಖಂಡ ವೈ.ಡಿ.ಹುಚ್ಚೇಗೌಡ ಮಾತನಾಡಿ, ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟನೆಗೆ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಕಾರ್ಯಕ್ರಮ ಮಾಡಿರುವುದು ಖಂಡನೀಯ. ಶಾಸಕರು ಈ ರೀತಿ ನಡೆದುಕೊಂಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಅಪಮಾನ ಮಾಡಿದ್ದಾರೆ. ಸಂಪೂರ್ಣ ಕಾಮಗಾರಿ ಮುಗಿಯದಿದ್ದರೂ ಸಂಸದರ ಮೇಲಿನ ದ್ವೇಷದಿಂದ ತರಾತುರಿಯಲ್ಲಿ ಟೇಪ್ ಕತ್ತರಿಸಿ ತೆರಳಿದ್ದಾರೆ. ಇವರ ನಡೆಯನ್ನು ವಿರೋಧಿಸುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಪೊಲೀಸರು ಹಾಗೂ ಆರೋಗ್ಯ ಇಲಾಖೆ ಕಟ್ಟಡ ಅಭಿವೃದ್ಧಿ ವಿಭಾಗದ ಇಂಜಿನಿಯರ್ ಜೀವನ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಉದ್ಘಾಟನೆಯ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ ಎಂದ ಇಂಜಿನಿಯರ್, ನಮ್ಮ ಇಲಾಖೆಗೆ ಇನ್ನೂ ಗುತ್ತಿಗೆದಾರ ದಯಾನಂದ್ ಅವರಿಂದ ಹಸ್ತಾಂತರವಾಗಿಲ್ಲ. ಪೂಜೆ ಸಲ್ಲಿಸಿರುವ ಕಾರ್ಯ ನಡೆದಿದ್ದರೂ ಅದು ಗುತ್ತಿಗೆದಾರ ದಯಾನಂದ್ ಮತ್ತು ಶಾಸಕ ರೇವಣ್ಣ ಅವರ ವಿಚಾರಕ್ಕೆ ಬಿಟ್ಟಿದ್ದ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ನಡುವೆ ಸ್ಥಳಕ್ಕೆ ಬಂದ ಜೆಡಿಎಸ್ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕೆಲಕಾಲ ಮಾತಿನ ಚಕಮುಕಿ ನಡೆಯಿತು. ಶಾಸಕ ರೇವಣ್ಣ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಸಿದ್ದಾರೆ. ಅವರಿಗೆ ಇದರಿಂದ ಹೆಸರು ಗಳಿಸಬೇಕೆಂದಿಲ್ಲ ಎಂದು ಜೆಡಿಎಸ್‌ನ ಮುಖಂಡರು ವಾಗ್ವಾದ ನಡೆಸಿದರು.
ಸಂಸದರ ಅನುದಾನವು ಸೇರ್ಪಡೆಯಾಗಿದೆ ಸಂಸದರನ್ನು ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಾಗಿತ್ತು. ಶಾಸಕರ ನಡೆಗೆ ಧಿಕ್ಕಾರ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು. ಬಳಿಕ ಪರಿಸ್ಥತಿ ತಿಳಿಯಾದ ಬಳಿಕ ಎಲ್ಲರೂ ಸ್ಥಳದಿಂದ ಕದಲಿದರು.
ಕಾಂಗ್ರೆಸ್ ಮುಖಂಡರಾದ ಕಮಲಮ್ಮ, ಬೀಚೇನಹಳ್ಳಿ ಬಸವರಾಜ್, ಗ್ಯಾರಂಟಿ ಸಮಿತಿ ಕಾರ್ಯದರ್ಶಿ ಪ್ರಸನ್ನಕುಮಾರ್ ಸೇರಿದಂತೆ ಇತರರು ಹಾಜರಿದ್ದರು.