ಹೊಳೆನರಸೀಪುರ: ತಾಲೂಕಿನ ದೊಡ್ಡ ಕುಂಚೇವು ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಸಮುದಾಯ ಆರೋಗ್ಯ ಕೇಂದ್ರವನ್ನು ಶಾಸಕ ಎಚ್.ಡಿ.ರೇವಣ್ಣ ಶುಕ್ರವಾರ ಉದ್ಘಾಟನೆ ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಂಸದ ಶ್ರೇಯಸ್ ಎಂ. ಪಟೇಲ್ ಅಸಮಾಧಾನ ವ್ಯಕ್ತಪಡಿಸಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಶಾಸಕರು ಉದ್ಧಟತನದಿಂದ ನಡೆದುಕೊಳ್ಳುತ್ತಿದ್ದಾರೆ. ಶಿಷ್ಟಾಚಾರ ಉಲ್ಲಂಘಿಸಿ ನಿಯಮಬಾಹಿರವಾಗಿ ಬೆಳಗಿನ ಜಾವ ಕದ್ದು ಮುಚ್ಚಿ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಯನ್ನು ನಡೆಸಿರುವುದು ಅವರ ರಾಜಕೀಯ ನಡೆಗೆ ಶೋಭೆ ತರುವುದಿಲ್ಲ. ಅಧಿಕಾರಿಗಳನ್ನು ಹೆದರಿಸಿ, ಬೆದರಿಸಿ ನಡೆದುಕೊಳ್ಳುವುದು ಇವರ ಹಿರಿತನಕ್ಕೆ ಗೌರವ ತಂದುಕೊಡುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶಿಷ್ಟಾಚಾರ ಉಲ್ಲಂಘಿಸಿ ನೂತನ ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆಗೆ ಕಾರಣವಾಗಿರುವ ಗುತ್ತಿಗೆದಾರ ದಯಾನಂದ್, ಆರೋಗ್ಯ ಇಲಾಖೆಯ ಇಂಜಿನಿಯರ್ ಜೀವನ್ ಹಾಗೂ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ವಿಷಯದಲ್ಲಿ ನಾನು ಸುಮ್ಮನಿರುವುದಿಲ್ಲ. ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ಇದನ್ನು ಪ್ರಸ್ತಾಪಿಸುತ್ತೇನೆ. ಸೂಕ್ತ ಕ್ರಮ ಜರುಗಿಸುವ ವಿಷಯದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿದರು.