ಶ್ರೀ ಕಾಲಭೈರವೇಶ್ವರ ನೂತನ ದೇವಾಲಯದಲ್ಲಿ ಶ್ರೀ ಶಂಭುನಾಥ ಸ್ವಾಮಿಜಿ ಮಾತನಾಡಿದರು. ರಾಮಚಂದ್ರ, ಪಸನ್ನ, ಪುಟ್ಟಸ್ವಾಮಿ, ಬಾಲು ಹಾಜರಿದ್ದರು. 
ಹಾಸನ

ಮಠ, ಮಂದಿರಗಳು ಮನಃಶಾಂತಿ ಕೇಂದ್ರಗಳು

ಅರಸೀಕೆರೆ ಗ್ರಾಮಂತರ : ದೇವಾಲಯ, ಮಠ, ಮಂದಿರಗಳು ಜಂಜಾಟದ ಜೀವನ ಸಾಗಿಸುತ್ತ ದಿನದೊಡುತ್ತಿರುವ ಮನುಷ್ಯನಿಗೆ ನೆಮ್ಮದಿ ಹಾಗೂ ಮನಃಶಾಂತಿ ನೀಡುವ ಆಧ್ಯಾತ್ಮಿಕ ಕೇಂದ್ರಗಳು ಎಂದು ಹಾಸನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಗಂಡಸಿ ಹೋಬಳಿ ರಾಂಜೀಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಕಾಲಭೈರವೇಶ್ವರ ಸ್ವಾಮಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದ ಧಾರ್ಮಿಕ ಸಮಾರಂಭದಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದರು.
ಗುರು ಹಿರಿಯರ ಮಾರ್ಗದರ್ಶನ, ಮಠ-ಮಂದಿರಗಳಂತಹ ಆಧ್ಯಾತ್ಮಿಕ ತಾಣಗಳು ನಮ್ಮ ಸುತ್ತಮುತ್ತ ಇದ್ದರೆ ಪ್ರತಿಯೊಬ್ಬ ಮನುಷ್ಯನ ಬದುಕು ಸಾರ್ಥಕತೆಯಿಂದ ಕೂಡಿರುತ್ತದೆ. ಅಂತಹ ಸಾರ್ಥಕತೆಯ ಕಾರ್ಯವನ್ನು ಕಾಲಭೈರವೇಶ್ವರ ಸ್ವಾಮಿಯ ದೇವಾಲಯ ನಿರ್ಮಾಣ ಮಾಡುವುದರ ಮೂಲಕ ಗ್ರಾಮಸ್ಥರು ಹಾಗೂ ಭಕ್ತರು ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದೇವಾಲಯದಲ್ಲಿ ವಿರಾಜಮಾನನಾಗಿ ಪ್ರತಿಷ್ಠಾಪನೆಗೊಂಡಿರುವ ಕಾಲಭೈರವೇಶ್ವರ ಸ್ವಾಮಿಯು ತನ್ನ ಭಕ್ತರನ್ನು ಹಾಗೂ ಗ್ರಾಮಸ್ಥರನ್ನು ಹಗಲು, ಇರುಳು ಕಾಯಲಿ. ನಿಮ್ಮೆಲ್ಲರ ಮನದ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಆಶೀರ್ವದಿಸಿದರು.
ಸಭಾ ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ನಿರ್ದೇಶಕ ರಾಮಚಂದ್ರ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪ್ರಸನ್ನ, ಕೊಪ್ಪಲು ಪುಟ್ಟಸ್ವಾಮಿ, ಹೊಸಳ್ಳಿ ಬಾಲು, ಮುಖಂಡರಾದ ಭೈರಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.