ಅರಕಲಗೂಡು ತಾಲೂಕಿನ ಜಮೀನಿನೊಂದರಲ್ಲಿ ತಂಬಾಕು ನಾಟಿ ಮಾಡಿರುವುದು.
ಅರಕಲಗೂಡು: ತಾಲೂಕಿನ ಹಲವೆಡೆ ಶನಿವಾರ ರಾತ್ರಿ ಸಾಧಾರಣ ಮಳೆಯಾಗಿದೆ. ಮಳೆಯಿಂದ ಗ್ರಾಮೀಣ ಭಾಗದ ಕೆಲವೆಡೆ ಕೃಷಿ ಚಟುವಟಿಕೆ ಚುರುಕುಗೊಂಡಿವೆ.
ರೈತರು ಉಳುಮೆ, ಬಿತ್ತನೆ ಪೂರ್ವ ಸಿದ್ಧತೆ ಹಾಗೂ ಬೀಜ ಬಿತ್ತನೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಾವಿ, ಕೆರೆ-ಕಟ್ಟೆಗಳಲ್ಲಿ ಸ್ವಲ್ಪ ಪ್ರಮಾಣದ ನೀರು ಸಂಗ್ರಹವಾಗಿದೆ. ಕೃಷಿ ಕಾರ್ಯಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಲು ಮತ್ತಷ್ಟು ಜೋರು ಮಳೆಯಾಗಬೇಕು. ಜೋಳ, ರಾಗಿ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆಗೆ ರೈತರು ಸಜ್ಜಾಗಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ಉತ್ತಮ ಗುಣಮಟ್ಟದ ಬೀಜ ಹಾಗೂ ರಸಗೊಬ್ಬರಗಳನ್ನು ಬಳಸುವಂತೆ ರೈತರಿಗೆ ಸಲಹೆ ನೀಡಿದ್ದಾರೆ. ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾದರೆ ಬಿತ್ತನೆಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಲ್ಲಿ ರೈತರು ಇದ್ದಾರೆ. ತಂಬಾಕು ನಾಟಿಗೆ ಇನ್ನಷ್ಟು ಹದ ಮಳೆ ಬೀಳಬೇಕು ಎನ್ನುತ್ತಾರೆ ರೈತರು.
ಮಳೆ ವಿವರ: ತಾಲೂಕಿನ ಮಳೆ ಮಾಪಕದಲ್ಲಿ ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಸಬಾ 1.0 ಮಿಮೀ, ಮಲ್ಲಿಪಟ್ಟಣ 2.0, ದೊಡ್ಡಮಗ್ಗೆ 4.4, ಕೊಣನೂರು 5.0, ಬಸವಾಪಟ್ಟಣ 1.0 ಮತ್ತು ರಾಮನಾಥಪುರದಲ್ಲಿ 4.8 ಮಿಮೀ ಮಳೆಯಾಗಿದೆ.