ಚನ್ನರಾಯಪಟ್ಟಣ ತಾಲೂಕು ರಾಗಿ ಕೇಂದ್ರಗಳ ಕುಂದು ಕೊರತೆ ಕುರಿತಂತೆ ಶಾಸಕ ಸಿ.ಎನ್.ಬಾಲಕೃಷ್ಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಪವನ್, ಅನುರಾಧಾ, ಹೇಮಂತ್ ಕುಮಾರ್, ಹೇಮಲತಾ, ಮಂಜುನಾಥ್, ಗೀತಾಮಣಿ ಇದ್ದರು. 
ಹಾಸನ

31ರವರೆಗೆ ರಾಗಿ ಖರೀದಿಗೆ ಅವಕಾಶ

ಚನ್ನರಾಯಪಟ್ಟಣ: ರಾಗಿ ಖರೀದಿ ವೇಳೆ ಗುಣಮಟ್ಟ ಹಾಗೂ ತೂಕದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಖರೀದಿಯಲ್ಲಿ ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ರಾಗಿ ಖರೀದಿ ಕೇಂದ್ರಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಾಗಿಗೆ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿಗೆ 4,886 ರೂ.ಬೆಂಬಲ ಘೋಷಣೆ ಮಾಡಿದೆ. ಖರೀದಿ ಕೇಂದ್ರದ ಅಧಿಕಾರಿಗಳು ಮಧ್ಯವರ್ತಿಗಳಿಗೆ ಆಸ್ಪದ ನೀಡದೆ ನೋಂದಣಿಯಾದ ಅರ್ಹ ರೈತರಿಂದ ರಾಗಿ ಖರೀದಿ ಪ್ರಕ್ರಿಯೆ ನಡೆಸಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.
ಸರ್ಕಾರದ ನಿಯಮಾನುಸಾರ ಒಬ್ಬ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗುತ್ತಿದೆ. ಪ್ರಸ್ತುತ ಏಜೆನ್ಸಿಯವರು ಎರಡು ಲಾರಿಗಳನ್ನು ಒದಗಿಸಿದ್ದು ಐದು ವಾಹನಗಳ ಅಗತ್ಯವಿದೆ. ವಾಹನಗಳ ಕೊರತೆಯಿಂದ ರೈತರು ಕಾಯುವ ಪರಿಸ್ಥಿತಿ ನಿರ್ಮಾಣ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ನಮ್ಮ ತಾಲೂಕು ವ್ಯಾಪ್ತಿಯ ಆರು ಖರೀದಿ ಕೇಂದ್ರದಲ್ಲಿ 13,148 ರೈತರು ನೋಂದಾಯಿಸಿದ್ದಾರೆ. ಒಟ್ಟಾರೆ ನಮ್ಮ ತಾಲೂಕಿನಲ್ಲಿ ನೋಂದಾಯಿತ ರೈತರಿಂದ 3,90,137 ಕ್ವಿಂಟಾಲ್ ರಾಗಿಯನ್ನು ಸರ್ಕಾರ ಖರೀದಿಸಲಿದೆ. ಇನ್ನೂ ಸಮಯವಿದ್ದು ರೈತರು ಗೊಂದಲಕ್ಕೊಳಗಾಗದೆ ರಾಗಿ ಮಾರಾಟ ಮಾಡಬಹುದು. ಮಾರ್ಚ್ 31ರವರೆಗೆ ರಾಗಿ ಖರೀದಿ ನಡೆಯಲಿದ್ದು, ಅಗತ್ಯವಿದ್ದಲ್ಲಿ ದಿನಾಂಕ ವಿಸ್ತರಣೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕೇಂದ್ರಕ್ಕೆ ಬರುವ ರೈತರಿಗಾಗಿ ಕುಡಿಯುವ ನೀರು, ನೆರಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗಿದೆ. ಸರ್ಕಾರದ ಈ ನೇರ ಖರೀದಿ ಯೋಜನೆಯಿಂದ ರೈತರಿಗೆ ಆರ್ಥಿಕವಾಗಿ ಹೆಚ್ಚಿನ ಅನುಕೂಲವಾಗಲಿದೆ. ಖರೀದಿಗೆ ನೋಂದಾಯಿಸಿಕೊಂಡಿರುವ ರೈತರಿಂದ ಆಹಾರ ಧಾನ್ಯಗಳ ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು. ತೂಕದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಬೇಕು. ಅನಗತ್ಯ ಸಮಸ್ಯೆ ಉಂಟಾದರೆ ಕಠಿಣ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶಿರಸ್ತೇದಾರ್ ಪವನ್, ಕರ್ನಾಟಕ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಅನುರಾಧಾ, ಶಿರಸ್ತೇದಾರ್ ಹೇಮಂತ್ ಕುಮಾರ್, ಆಹಾರ ನಿರೀಕ್ಷಕಿ ಹೇಮಲತಾ, ಖರೀದಿ ಅಧಿಕಾರಿಗಳಾದ ಮಂಜುನಾಥ್, ಗೀತಾಮಣಿ, ಚಂದ್ರಶೇಖರ್, ಶುಕ್ಲ, ಕಂದಾಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.