ಅರಕಲಗೂಡು ತಾಲೂಕಿನ ಕಟ್ಟೇಪುರದ ಕೃಷ್ಣರಾಜ ಅಣೆಕಟ್ಟೆಗೆ ಸೋಮವಾರ ಶಾಸಕ ಎ. ಮಂಜು ಬಾಗಿನ ಅರ್ಪಿಸಿ ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು. ಮುಖಂಡರಾದ ಚೌಡೇಗೌಡ, ಇಮ್ರಾನ್, ಸತೀಶ್ ಇತರರಿದ್ದರು.
ತಾಲೂಕಿನ ಕಟ್ಟೇಪುರದ ಕೃಷ್ಣರಾಜ ಅಣೆಕಟ್ಟೆಯಲ್ಲಿ ಸೋಮವಾರ ಶಾಸಕ ಎ. ಮಂಜು ಕಾವೇರಿ ತಾಯಿಗೆ ಸಂಪ್ರದಾಯಬದ್ಧವಾಗಿ ಬಾಗಿನ ಅರ್ಪಿಸಿ, ನಾಲೆಗೆ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದು, ರೈತರ ಹಿತದೃಷ್ಟಿಯಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ ಎಂದರು.
ಮುಂದಿನ ದಿನಗಳಲ್ಲಿಯೂ ಸಮೃದ್ಧ ಮಳೆಯಾಗಿ ರೈತರು ಉತ್ತಮ ಬೆಳೆ ಬೆಳೆಯುವಂತಾಗಲಿ ಎಂಬ ಉದ್ದೇಶದಿಂದ ಕಾವೇರಿ ತಾಯಿಗೆ ಬಾಗಿನ ಅರ್ಪಿಸಿ ಪ್ರಾರ್ಥಿಸಲಾಗಿದೆ. ಕಾವೇರಿ ತಾಯಿಯ ಆಶೀರ್ವಾದದಿಂದ ರೈತರ ಬದುಕು ಹಸನಾಗಲಿ, ಸಮೃದ್ಧ ಬೆಳೆ ದೊರೆತು ಸುಖ-ಸಮೃದ್ಧಿ ನೆಲೆಸಲಿ ಎಂದು ಹಾರೈಸಿದರು.
ರೈತರ ಹಿತವೇ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಕೃಷಿಗೆ ಅಗತ್ಯವಾದ ನೀರಾವರಿ ಸೌಲಭ್ಯಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ. ನೀರಿನ ಸಮರ್ಪಕ ನಿರ್ವಹಣೆ ಮೂಲಕ ಅಚ್ಚುಕಟ್ಟು ಪ್ರದೇಶದ ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.