ಹಾಸನ ತಾಲೂಕಿನ ಕಸಬಾ ಹೋಬಳಿಯ ಸಿಂಗಪಟ್ಟಣ ಗ್ರಾಮದ ಹಾಲಿನ ಡೇರಿಯಲ್ಲಿ ಲೋಪದೋಷ ಹಿನ್ನೆಲೆಯಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರು ಹಾಗೂ ಹಾಲು ಉತ್ಪಾದಕರಿಂದ ಮಾಹಿತಿ ಪಡೆದುಕೊಂಡರು.
- ಸಿಂಗಪಟ್ಟಣ ಹಾಲಿನ ಡೇರಿಗೆ ಶಾಸಕ ಸ್ವರೂಪ್ ಭೇಟಿ
- ಅವ್ಯವಹಾರದ ದೂರು ಬಂದಿದ್ದ ಹಿನ್ನೆಲೆ ತನಿಖೆಗೆ ಆದೇಶ
ಹಾಸನ: ಕಸಬಾ ಹೋಬಳಿಯ ಸಿಂಗಪಟ್ಟಣ ಗ್ರಾಮದ ಹಾಲಿನ ಡೇರಿಯಲ್ಲಿ ಲೋಪದೋಷ ಹಿನ್ನೆಲೆಯಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಇತ್ತೀಚೆಗೆ ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರು ಹಾಗೂ ಹಾಲು ಉತ್ಪಾದಕರಿಂದ ಮಾಹಿತಿ ಪಡೆದುಕೊಂಡರು.
ಘಟನೆಗೆ ಸಂಬಂಧಪಟ್ಟಂತೆ ಹಾಲು ಉತ್ಪಾದಕರಿಂದ ಬಂದ ದೂರುಗಳನ್ನು ಕೇಳಿದ ಶಾಸಕರು, ಅಧಿಕಾರಿಗಳಿಂದಲೂ ಮಾಹಿತಿ ಪಡೆದು ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸುವಂತೆ ಸೂಚನೆ ನೀಡಿದರು.
ರೈತರಿಗೆ ಅನುಕೂಲವಾಗುವ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದರೂ ನಾನು ಸಹಿಸುವುದಿಲ್ಲ, ರೈತರು ಕಷ್ಟಪಟ್ಟು ಹೈನುಗಾರಿಕೆ ಮಾಡಿ ಹಾಲು ಉತ್ಪಾದಿಸಿ, ಅದನ್ನು ಡೇರಿಗೆ ಹಾಕುವ ಮೂಲಕ ಅದರಿಂದ ಬಂದ ಆದಾಯದಿಂದ ಬದುಕು ನಡೆಸುತ್ತಿದ್ದಾರೆ.ಅವರಿಗೆ ತೊಂದರೆ ಆಗಬಾರದು. ಇದರಲ್ಲಿ ಯಾವುದೇ ರೀತಿಯ ಅವ್ಯವಹಾರ ನಡೆದರೂ, ಅದನ್ನು ಯಾರೇ ಮಾಡಿದ್ದರೂ ಅಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಚ್ಚರಿಕೆ ನೀಡಿದರು.
ಹಿಂದೆ ಇದ್ದ ಕಾರ್ಯದರ್ಶಿ ಕಳೆದ 21 ವರ್ಷಗಳಿಂದ ಇಲ್ಲಿಯೇ ಇದ್ದು ಸಾಕಷ್ಟು ಹಣ ದುರ್ಬಳಕೆಗೆ ಕಾರಣರಾಗಿದ್ದಾರೆ ಎಂದು ಗ್ರಾಮಸ್ಥರೇ ದೂರಿದ್ದಾರೆ. ಅವರಿಗೆ ಸೂಕ್ತ ದಂಡ ವಿಧಿಸಬೇಕು ಹಾಗೂ ಕಾರ್ಯದರ್ಶಿವಿರುದ್ಧ ಕ್ರಮ ಆಗಬೇಕು ಒತ್ತಾಯಿಸಿದ್ದಾರೆ.
ಹಾಲು ಉತ್ಪಾದಕರಿಗೆ ಯಾವುದೇ ತೊಂದರೆ ಆಗಬಾರದು, ರೈತರು ಉಳಿಯಬೇಕು. ಈ ವಿಚಾರದಲ್ಲಿ ಗ್ರಾಮಸ್ಥರಿಗೆ ಅಧಿಕಾರ ನೀಡಲಾಗಿದೆ. ಹಾಲು ಉತ್ಪಾದಕ ಸಂಘದಲ್ಲಿ 12 ಮಂದಿ ಸದಸ್ಯರಿದ್ದು ಅವರೇ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
ನಗರದ ಹೊರ ವಲಯದ ಸದಾಶಿವನಗರ ಬಡಾವಣೆಯಲ್ಲಿ ಸುಮಾರು 80 ಲಕ್ಷ ರೂ.ವೆಚ್ಚದ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ನೆರವೇರಿಸಿದರು.
ಹಾಸನ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿದ ಹಿನ್ನೆಲೆಯಲ್ಲಿ ನಗರದ ಅಭಿವದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲಿ ಈಗಾಗಲೇ ದಿನನಿತ್ಯ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತಿದ್ದು, ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಸದಾಶಿವನಗರ ಹಳೆಯ ಬಡಾವಣೆ, ಇಲ್ಲಿ ರಸ್ತೆ, ಚರಂಡಿ ಇಲ್ಲ ಎಂದು ನಿವಾಸಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ 80 ಲಕ್ಷ ರೂ. ವೆಚ್ಚದ ಕಾಮಗಾರಿ ಚಾಲನೆ ನೀಡಲಾಗಿದೆ ಎಂದರು. ಗುಣಮಟ್ಟದ ಕಾಮಗಾರಿ ಮಾಡಿಸುವ ನಿಟ್ಟಿನಲ್ಲಿ ಇಂಜಿನಿಯರ್ ಅವರು ಗಮನ ಹರಿಸಬೇಕು ಎಂದ ಶಾಸಕರು, ಬಡಾವಣೆಯಲ್ಲಿ ಹಂತ-ಹಂತವಾಗಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.