ಆಲೂರಿನಲ್ಲಿ ಆಯೋಜಿಸಿದ್ದ ಸೆಸ್ಕ್ ಅಧಿಕಾರಿಗಳ ತುರ್ತು ಸಭೆಯಲ್ಲಿ ಶಾಸಕ ಸಿಮೆಂಟ್ ಮಂಜು ಮಾತನಾಡಿದರು. ವೆಂಕಟೇಶ್, ಸುಬ್ರಹ್ಮಣ್ಯ ಶರ್ಮ, ಗಿರೀಶ್, ಮಂಜುನಾಥ್, ರವಿ, ಅರ್ಜುನ್ ಇತರರು ಇದ್ದರು.  
ಹಾಸನ

ಸೆಸ್ಕ್ ಅಧಿಕಾರಿಗಳ ಉಡಾಫೆ ವರ್ತನೆಗೆ ಶಾಸಕ ತರಾಟೆ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಅಸಮರ್ಪಕ ವಿದ್ಯುತ್ ಪೂರೈಕೆಗೆ ಸಿಮೆಂಟ್ ಮಂಜು ಅಸಮಾಧಾನ
  • ಆಲೂರಿನಲ್ಲಿ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ತುರ್ತು ಸಭೆ
ಆಲೂರು: ತಾಲೂಕಿನಾದ್ಯಂತ ರೈತರ ಪಂಪ್‌ಸೆಟ್‌ಗಳಿಗೆ ಅಸಮರ್ಪಕವಾಗಿ ವಿದ್ಯುತ್ ಸರಬರಾಜು ಮಾಡುತ್ತಿರುವ ಹಾಗೂ ಸೆಸ್ಕ್ ಸಿಬ್ಬಂದಿ, ಅಧಿಕಾರಿಗಳ ಉಡಾಫೆ ವರ್ತನೆಗೆ ಶಾಸಕ ಸಿಮೆಂಟ್ ಮಂಜು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸೆಸ್ಕ್ ಅಧಿಕಾರಿಗಳ ತುರ್ತು ಸಭೆಯಲ್ಲಿ ಮಾತನಾಡಿ, ಸರಿಯಾಗಿ ವಿದ್ಯುತ್ ನೀಡುತ್ತಿಲ್ಲ ಆರೋಪಿಸಿ ರೈತರು ಮತ್ತು ರೈತ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೂಳ್ಳಬೇಕೆಂದು ಅಧಿಕಾರಿಗಳಗೆ ಸೂಚನೆ ನೀಡಿದರು.
ಸಭೆಯಲ್ಲಿ ರೈತರು, ಮುಖಂಡರು ಮಾತನಾಡಿ, ಸೆಸ್ಕ್ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನ ಹಾಗೂ ಸೇವಾ ವೈಫಲ್ಯವನ್ನು ಶಾಸಕರ ಮುಂದೆ ವಿವರವಾಗಿ ಬಿಚ್ಚಿಟ್ಟರು. ಸರ್ಕಾರದ ನಿರ್ದೇಶನದಂತೆ ನಿತ್ಯ 7ಗಂಟೆಗಳ ವಿದ್ಯುತ್ ನೀಡಬೇಕಾದರೆ, ಹಗಲಿನ ವೇಳೆಯಲ್ಲೇ ನೀಡಬೇಕಾದ 4 ಗಂಟೆಗಳ ವಿದ್ಯುತ್ ಕೂಡ ಸಮರ್ಪಕವಾಗಿ ದೊರೆಯುತ್ತಿಲ್ಲ. ಇಲಾಖೆ ಹಿರಿಯ ಅಧಿಕಾರಿಗಳು ಲೈನ್ ಸಮಸ್ಯೆ ಎಂಬ ಕಾರಣ ಹೇಳಿ ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಇದರ ಪರಿಣಾಮವಾಗಿ ಬೇಸಿಗೆಯ ಸಮಯದಲ್ಲಿ ಮೆಣಸಿನಕಾಯಿ, ಜೋಳ ಹಾಗೂ ತೋಟಗಾರಿಕೆ ಬೆಳೆಗಳಾದ ಆಡಕೆ, ಕಾಫಿ, ತೆಂಗಿನ ತೋಟಗಳಿಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಸಾಲ ಮಾಡಿ ಬೆಳೆ ಬೆಳೆದ ರೈತರು ಆದಾಯ ನಿರೀಕ್ಷೆ ಇಟ್ಟುಕೊಂಡಿದ್ದರೂ, ವಿದ್ಯುತ್ ಕೊರತೆಯಿಂದ ಬೆಳೆಗಳು ಒಣಗುವ ಪರಿಸ್ಥಿತಿ ಎದುರಾಗಿದೆ ಎಂದು ರೈತರು ಅಳಲು ವ್ಯಕ್ತಪಡಿಸಿದರು.
ರೈತರ ಸಮಸ್ಯೆಗಳನ್ನು ಆಲಿಸಿದ ಶಾಸಕ ಸಿಮೆಂಟ್ ಮಂಜು, ಸೆಸ್ಕ್ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ರೈತರಿಗೆ ನೀಡಬೇಕಾದ 7 ಗಂಟೆಗಳ ವಿದ್ಯುತ್ ಕೂಡ ಸರಿಯಾಗಿ ನೀಡದೆ ಅವರ ಜೀವನದೊಂದಿಗೆ ಆಟವಾಡುತ್ತೀರಿ. ಪವರ್‌ಮನ್‌ಗಳು ಕಚೇರಿ ವೇಳೆಯನ್ನು ಕಾಯದೇ, ವಿದ್ಯುತ್ ಸರಬರಾಜು ಸಮಯದಲ್ಲೇ ಬೆಳಗ್ಗಿನಿಂದಲೇ ಕಾರ್ಯ ನಿರ್ವಹಿಸಬೇಕು. ಲೈನ್ ದೋಷ ಕಂಡುಬಂದ ಕೂಡಲೇ ಯಾವುದೇ ಕಾರಣ ಹೇಳದೆ ತಕ್ಷಣ ದುರಸ್ತಿ ಮಾಡಬೇಕು ಎಂದು ಖಡಕ್ ಸೂಚನೆ ನೀಡಿದರು. ಇನ್ನು ಮುಂದೆ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ವೆಂಕಟೇಶ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಶರ್ಮ, ಗಿರೀಶ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಂಜುನಾಥ್, ಸೆಸ್ಕ್ ಎಇಇ ರವಿ, ಅರ್ಜುನ್ ಇತರರು ಇದ್ದರು.