ಅರಸೀಕೆರೆ ಗ್ರಾಮಾಂತರ ತಾಲೂಕು ಬಾಣಾವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆದಿರುವ ಖರೀದಿ ಕೇಂದ್ರಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಶ್ರೀನಿವಾಸ್, ಜಯಣ್ಣ, ರಮೇಶ್, ಪ್ರಕಾಶ್, ಮಹಮದ್ ಇಬ್ರಾಹಿಂ ಖಾದರ್, ಮಹಾಂತೇಶ್ ದಾನಪ್ಪ ಇದ್ದರು.
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರಕ್ಕೆ ಬುಧವಾರ ಗೃಹ ಮಂಡಳಿ ಅಧ್ಯಕ್ಷರೂ ಆದ ಕೆ.ಎಂ.ಶಿವಲಿಂಗೇಗೌಡ ಬುಧವಾರ ಭೇಟಿ ನೀಡಿ ರೈತರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಅಧಿಕಾರಿಗಳೊಂದಿಗೆ ತನಾಡಿದ ಅವರು, ರೈತರಿಗೆ ಯಾವುದೇ ಸಮಸ್ಯೆಯಾಗದಂತೆ ಪಾರದರ್ಶಕವಾಗಿ ರಾಗಿ ಖರೀದಿಸಬೇಕು. ದಲ್ಲಾಳಿಗಳು ಹಾಗೂ ವರ್ತಕರ ಕಾಟದಿಂದ ರೈತರಿಗೆ ಅನ್ಯಾಯವಾಗದಂತೆ ನಿಗಾ ವಹಿಸಬೇಕು. ಖರೀದಿಗೂ ಮುನ್ನ ರಾಗಿಯನ್ನು ಜರಡಿ ಮಾಡಿ ಉತ್ತಮವಾದ ರಾಗಿಯನ್ನು ಕೊಂಡುಕೊಳ್ಳಬೇಕು. ಇದರಲ್ಲಿ ವ್ಯತ್ಯಾಸವಾದರೆ ಕೇಂದ್ರದ ಅಧಿಕಾರಿಗಳೇ ಹೊಣೆಗಾರರು ಎಂದು ಎಚ್ಚರಿಕೆ ನೀಡಿದರು.
ಒಂದು ಕ್ವಿಂಟಾಲ್‌ಗೆ ಚೀಲದ ರೂಪದಲ್ಲಿ ರೈತರಿಂದ ಒಂದು ಕೆಜಿಯನ್ನು ಮಾತ್ರ ಹೆಚ್ಚಿಗೆ ಪಡೆಯಬೇಕು. ಲೋಡರ್‌ಗಳು ಹಾಗೂ ಹಮಾಲಿಗಳಿಂದಲೂ ರೈತರಿಗೆ ಯಾವುದೇ ಸಮಸ್ಯೆ ಬಾರದ ಹಾಗೆ ಅಧಿಕಾರಿಗಳೇ ಖುದ್ದು ಗಮನಹರಿಸಬೇಕು. ಖರೀದಿ ಕೇಂದ್ರದ ಟೆಂಡರ್ ಪಡೆದಿರುವ ಗುತ್ತಿಗೆದಾರರು ಕೇಂದ್ರಕ್ಕೆ ಪ್ರತಿದಿನ ಎರಡರಿಂದ ಮೂರು ಲಾರಿಗಳ ವ್ಯವಸ್ಥೆ ಮಾಡಬೇಕು ಎಂದು ಸಲಹೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಶ್ರೀನಿವಾಸ್, ಬಗರ್ ಹುಕುಂ ಕಮಿಟಿ ಸದಸ್ಯ ಬಿ.ಎಂ.ಜಯಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀಣಾ ಸುರೇಶ್, ಸದಸ್ಯರಾದ ಡಿ.ಆರ್.ರಾಜು, ಬಿ.ಆರ್.ಸುರೇಶ್ ಕಾಚಿಘಟ್ಟ, ಮಹೇಶ್, ಸಹಕಾರ ಸಂಘದ ಸದಸ್ಯ ರಮೇಶ್, ಮುಖಂಡರಾದ ಟಿ.ಎಲ್.ಪ್ರಕಾಶ್ ಮಹಮದ್, ಇಬ್ರಾಹಿಂ ಸಾಬ್, ಕೆ.ಸಿ.ಖಾದರ್ ಭಾಷಾ, ಮಹಾಂತೇಶ್ ದಾನಪ್ಪ ಉಪಸ್ಥಿತರಿದ್ದರು.