ಬೇಲೂರು ಪಟ್ಟಣದ ಚನ್ನಕೇಶವ ನಗರದ ನಿವಾಸಿಗರ ಮನವಿ ಮೇರೆಗೆ ಶಾಸಕ ಎಚ್.ಜೆ.ಸುರೇಶ್ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಬೇಲೂರು: ಪಟ್ಟಣದ ಚನ್ನಕೇಶವನಗರ ಬಡಾವಣೆ ನಿವಾಸಿಗಳಿಗೆ ಎರಡು ದಶಕಗಳೇ ಕಳೆದರೂ ಹಕ್ಕು ಪತ್ರ ನೀಡದಿರುವುದು ವಿಪರ್ಯಾಸದ ಸಂಗತಿಯಾಗಿದ್ದು, ಎಲ್ಲ ನಿವಾಸಿಗಳಿಗೂ ಶೀಘ್ರದಲ್ಲೇ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು. ಪಟ್ಟಣದ ಚನ್ನಕೇಶವ ನಗರದ ನಿವಾಸಿಗರ
ಮನವಿ ಮೇರೆಗೆ ಸಂಬಂಧಿಸಿದ ಅಧಿಕಾರಿಗಳನ್ನು ಮಂಗಳವಾರ ಸ್ಥಳಕ್ಕೆ ಕರೆಸಿ ಸಭೆ ನಡೆಸಿದರು. ಸ್ಥಳದಲ್ಲೇ ಸಮಸ್ಯೆಗಳಿಗೆ ಉತ್ತರ ಮತ್ತು ಪರಿಹಾರ ನೀಡುವ ಕೆಲಸ ಮಾಡಿದಲ್ಲದೆ, ತಿಂಗಳೊಳಗೆ ನಿವಾಸಿಗಳಿಗೆ ಹಕ್ಕುಪತ್ರ ಹಾಗೂ ಪುರಸಭೆಯಿಂದ ಇ-ಸೊತ್ತು ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಚನ್ನಕೇಶವ ನಗರದ ಜನರಿಗೆ ಓಡಾಡಲು ಸರಿಯಾದ ರಸ್ತೆ ಇಲ್ಲ. ಮನೆಗಳಲ್ಲಿ ವಾಸವಿರುವವರಿಗೆ ಹಕ್ಕು ಪತ್ರಗಳನ್ನು ನೀಡಿಲ್ಲ. ಹೀಗಾದರೆ ನಾಗರಿಕರು ಹೇಗೆ ನೆಮ್ಮದಿ ಜೀವನ ನಡೆಸಲು ಸಾಧ್ಯ. ನಾನು ಚುನಾವಣೆ ಪೂರ್ವದಲ್ಲಿ ಬಂದ ಸಂದರ್ಭದಲ್ಲಿ ನಿವಾಸಿಗಳ ಬವಣೆ ಅರಿತು ಶೀಘ್ರವೇ ಹಕ್ಕುಪತ್ರ ಕೊಡಿಸುತ್ತೇನೆಂದು ಮಾತು ಕೊಟ್ಟಿದ್ದೆ. ಇಲ್ಲಿ ಅಂಬೇಡ್ಕರ್ ವಿಶೇಷ ಯೋಜನೆಯಲ್ಲಿ 37 ಜನರಿಗೆ ಹಕ್ಕುಪತ್ರ ಸಿಕ್ಕಿರುವುದು ಬಿಟ್ಟರೆ 172 ಮನೆಗಳಿಗೆ ಹಕ್ಕುಪತ್ರ ಇನ್ನೂ ಸಿಕ್ಕಿಲ್ಲ. ಉಳಿದವರಿಗೆ ಒಂದು ತಿಂಗಳಲ್ಲಿ ಹಕ್ಕುಪತ್ರ ನೀಡಲು ಕೊಳಚೆ ನಿರ್ಮೂಲನ ಮಂಡಳಿ ಅಭಿವೃದ್ಧಿ ನಿಗಮದ ಅಧಿಕಾರಿಗೆ ತಿಳಿಸಿದ್ದೇನೆ. ಪುರಸಭೆ ಮುಖ್ಯಾಧಿಕಾರಿ, ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಸರಿಯಾದ ಮಾಹಿತಿ ಪಡೆದು ಹಕ್ಕುಪತ್ರ ಕೊಡಿಸಬೇಕು. ನಂತರ ಪುರಸಭೆಯಿಂದ ಇ-ಸೊತ್ತು ಮಾಡಿಕೊಡಬೇಕು. ಇದಕ್ಕೆ ಖರ್ಚಾಗುವ ವೆಚ್ಚವನ್ನು ನಾನೇ ಭರಿಸುತ್ತೇನೆ. ಇಲ್ಲಿಗೆ ಬೇಕಾದ ಎಲ್ಲ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪುರಸಭೆ ಸದಸ್ಯ ಬಿ.ಸಿ.ಜಗದೀಶ್ ಮಾತನಾಡಿ, ಶಾಸಕ ಎಚ್.ಕೆ.ಸುರೇಶ್ ಅವರು ಬದ್ಧತೆವುಳ್ಳ ರಾಜಕಾರಣಿಯಾದ ಕಾರಣ ಪುರಸಭೆಯ ಸಮಸ್ಯೆಗಳನ್ನು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ, ಅಭಿವೃದ್ಧಿಗೆ ಒತ್ತು ನೀಡಿದ್ದಾರೆ. ಜತೆಗೆ ಬಡವರಿಗೆ ನಿವೇಶನ ನೀಡಲು, ಚನ್ನಕೇಶವ ನಗರ ನಿವಾಸಿಗಳಿಗೆ ಹಕ್ಕುಪತ್ರ ಕೊಡಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಪುರಸಭಾ ಸದಸ್ಯರಾದ ಶ್ರೀನಿವಾಸ, ಮುಖ್ಯಾಧಿಕಾರಿ ಬಸವರಾಜ್ ಶಿವ್ಗಾವಿ, ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಮುಖಂಡ ನಿಂಗರಾಜ್, ರಮೇಶ್ ಸೇರಿದಂತೆ ಇತರರಿದ್ದರು.