ಹೊಳೆನರಸೀಪುರ ತಾಲೂಕಿನ ಲಕ್ಕೂರು ಗ್ರಾಮದಲ್ಲಿ ಆಯುಷ್ ಆರೋಗ್ಯ ಉಪ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಾಸಕ ಎಚ್.ಡಿ. ರೇವಣ್ಣ ಭೂಮಿಪೂಜೆ ನೆರವೇರಿಸಿದರು. 
ಹಾಸನ

ಒಂದೇ ಕಾಮಗಾರಿಗೆ ಶಾಸಕ, ಸಂಸದ ಫೂಮಿಪೂಜೆ!

ಅಭಿನಯ್ ಎಚ್.ಎಂ
ಹೊಳೆನರಸೀಪುರ : ಒಂದೇ ಕಾಮಗಾರಿಗೆ ಶಾಸಕ ಹಾಗೂ ಸಂಸದ ಪೈಪೋಟಿ ಮೇಲೆ ಒಬ್ಬರಾದ ಮೇಲೊಬ್ಬರು ಭೂಮಿಪೂಜೆ ನೆರವೇರಿಸುವ ಮೂಲಕ ರಾಜಕೀಯ ಜಿದ್ದಾಜಿದ್ದಿಗೆ ಅಡಿಗಲ್ಲು ಹಾಕಿದ್ದಾರೆ.
ತಾಲೂಕಿನ ತಾತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕೂರು ಗ್ರಾಮಕ್ಕೆ ಕೇಂದ್ರ ಸರ್ಕಾರದಿಂದ ಆಯುಷ್ ಆರೋಗ್ಯ ಉಪ ಕೇಂದ್ರ ಮಂಜೂರಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನಿಗದಿಯಾಗಿತ್ತು. ಗ್ರಾಮದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಬೆಂಬಲಕ್ಕೆ ಪುಷ್ಟಿ ನೀಡಿರುವ ನಾಯಕರು ಪೈಪೋಟಿ ಮೇರೆಗೆ ಭೂಮಿಪೂಜೆ ನೆರವೇರಿಸಿದ್ದಾರೆ. ಬೆಳಗ್ಗೆ ಗ್ರಾಮಕ್ಕೆ ಆಗಮಿಸಿದ ಸಂಸದ ಶ್ರೇಯಸ್ ಎಂ.ಪಟೇಲ್ ಭೂಮಿಪೂಜೆ ನೆರವೇರಿಸಿ ನಿರ್ಗಮಿಸಿದರು. ನಂತರ ಗ್ರಾಮಕ್ಕೆ ಆಗಮಿಸಿದ ಶಾಸಕ ಎಚ್.ಡಿ.ರೇವಣ್ಣ ಗ್ರಾಮಸ್ಥರೊಡಗೂಡಿ ಭೂಮಿಪೂಜೆ ನೆರವೇರಿಸಿ ತೆರಳಿದರು.
ಗ್ರಾಮೀಣ ಭಾಗದ ನಾಗರಿಕರ ತುರ್ತು ಆರೋಗ್ಯ ರಕ್ಷಣೆ ದೃಷ್ಟಿಯಿಂದ 65 ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಪ್ರತ್ಯೇಕವಾಗಿ ಶಾಸಕ ಹಾಗೂ ಸಂಸದ ಭೂಮಿಪೂಜೆ ನೆರವೇರಿಸಿರುವುದು ತಾಲೂಕಿನಲ್ಲಿ ಮುಂದಿನ ರಾಜಕೀಯ ಜಿದ್ದಾಜಿದ್ದಿಗೆ ಮುನ್ನುಡಿ ಬರೆದಂತಾಗಿದೆ. ತಾಲೂಕಿನಲ್ಲಿ ಇದೇ ಪ್ರಥಮ ಬಾರಿಗೆ ಶಾಸಕ ಹಾಗೂ ಸಂಸದ ಪೈಪೋಟಿ ಮೇರೆಗೆ ಭೂಮಿಪೂಜೆ ನೆರವೇರಿಸಿರುವುದು ಕಾರ್ಯಕರ್ತರಿಗೆ ಅಚ್ಚರಿಯನ್ನುಂಟು ಮಾಡಿದೆ. ಅಲ್ಲದೆ ಯಾರೂ ಕೂಡ ಒಬ್ಬರನ್ನೊಬ್ಬರು ಟೀಕೆ ಮಾಡದೆ ತೆರಳಿರುವುದು ಗಮನಾರ್ಹ. ಗ್ರಾಮಸ್ಥರಾದ ಜಯರಾಮ, ಶಂಕರೇಗೌಡ, ಮಲ್ಲೇಶ್, ನಾಗೇಗೌಡ, ಚೇತನ್, ಮಂಜುನಾಥ್, ಇತರರು ಇದ್ದರು.