ಬೇಲೂರು ತಾಲೂಕಿನ ಹೆಬ್ಬಾಳು ಗ್ರಾಪಂ ಕಟ್ಟಡದ ಮೇಲ್ಬಾಗದಲ್ಲಿ ನಿರ್ಮಿಸಿರುವ ಸಭಾ ಭವನವನ್ನು ಶಾಸಕ ಎಚ್.ಕೆ.ಸುರೇಶ್ ಉದ್ಘಾಟಿಸಿದರು. ಗ್ರಾಪಂ ಆಡಳಿತಾಧಿಕಾರಿ ಹಾಗೂ ಸೆಸ್ಕ್ ಎಇಇ ಬಸವರಾಜ್, ಸಿಡಿಪಿಒ ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್, ಮಾಜಿ ಸದಸ್ಯರಾದ ಹಾಲೇಗೌಡ, ಪ್ರತಿಭಾ, ಧ್ರುವಕುಮಾರಿ ಇತರರಿದ್ದರು. 
ಹಾಸನ

ಹೆಬ್ಬಾಳು ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಯತ್ನ

ಎ. ಆರ್. ರಘುರಾಮ

ಬೇಲೂರು :

ಯಗಚಿ ಜಲಾಶಯದ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯ 61 ಕೆರೆಗಳನ್ನು ತುಂಬಿಸುವ ಹೆಬ್ಬಾಳು ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸದನದಲ್ಲಿ ಚರ್ಚಿಸಿ, ಶೀಘ್ರ ಕಾರ್ಯಗತ ಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.

ತಾಲೂಕಿನ ಹೆಬ್ಬಾಳು ಗ್ರಾಮ ಪಂಚಾಯಿತಿ ಕಟ್ಟಡದ ಮೇಲ್ಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾ ಭವನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಬಯಲುಸೀಮೆಗೆ ಯಗಚಿ ಏತ ನೀರಾವರಿ, ರಣಘಟ್ಟ, ಎತ್ತಿನಹೊಳೆ ಯೋಜನೆಗಳಿಂದ ಅನುಕೂಲವಾಗಿದೆ. ಆದರೆ ಯಗಚಿ ಜಲಾಶಯದ ಸಮೀಪವಿರುವ ಬಂಟೇನಹಳ್ಳಿ, ನಾರಾಯಣಪುರ, ಹೆಬ್ಬಾಳು, ಯಲಹಂಕ ಹಾಗೂ ರಾಜನಶಿರೂರು ಗ್ರಾಮಗಳಿಗೆ ನೀರಾವರಿ ಸೌಲಭ್ಯವಿಲ್ಲದರಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ ಆದ್ದರಿಂದ ಹೆಬ್ಬಾಳು ಏತ ನೀರಾವರಿ ಯೋಜನೆಗೆ ಡಿಪಿಆರ್ ಸಿದ್ಧಪಡಿಸಲಾಗಿದೆ.
ಈ ಸಂಬಂಧ ಸದನದಲ್ಲಿಯೂ ಚರ್ಚಿಸಿದ್ದು, ಸಚಿವರನ್ನು ಭೇಟಿಯಾಗಿ ಯೋಜನೆಗೆ ವೇಗ ನೀಡುವಂತೆ ಮನವಿ ಮಾಡಲಾಗುವುದು ಂದರು. ಹೆಬ್ಬಾಳು ಭಾಗದಲ್ಲಿ ಹೈನುಗಾರಿಕೆಯನ್ನೇ ಹೆಚ್ಚು ಅವಲಂಬಿಸಿದವರು ಇದ್ದಾರೆ. ಅವರ ಅನುಕೂಲಕ್ಕಾಗಿ ಸುಸಜ್ಜಿತ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗುವುದು.
ಹಿರೇಕೆರೆ ಸಮೀಪದ ಮನೆ, ಜಮೀನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ 50 ಲಕ್ಷ ರೂ. ಅನುದಾನ ನೀಡಲಾಗುವುದು. ಹೆಬ್ಬಾಳು ಸುತ್ತಮುತ್ತಲಿನ 13 ಗ್ರಾಮಗಳ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕೆಪಿಎಸ್ ಶಾಲೆ ಆರಂಭಿಸಲು ಪ್ರಯತ್ನಿಸಲಾಗುವುದು ಎಂದರು.
ಬಗರ್‌ಹುಕುಂ ಸಾಗುವಳಿ ಪತ್ರಕ್ಕೆ ಸಂಬಂಧಿಸಿದ ಅರ್ಜಿಗಳು ಸಿಐಡಿ ಹಾಗೂ ನ್ಯಾಯಾಲಯದ ವಿಚಾರಣೆಯಲ್ಲಿದೆ. ಈ ಭಾಗದ ಅನೇಕ ರೈತರಿಗೆ ಇದರಿಂದ ಅನ್ಯಾಯವಾಗಿರುವುದು ಗಮನದಲ್ಲಿದೆ. ಈ ಕುರಿತು ಕಂದಾಯ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ. ಅಲ್ಲದೆ ಹೆಬ್ಬಾಳು ಗ್ರಾಮ ಪಂಚಾಯಿತಿ ಮೇಲೆ ಸುಸಜ್ಜಿತ ಸಭಾ ಭವನ ನಿರ್ಮಿಸಿರುವುದನ್ನು ಸರಿಯಾಗಿ ಸದೂಪಯೋಗ ಮಾಡಿ ಕೊಳ್ಳಬೇಕು. ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವಿನಾಶ್ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಕುಡಿಯುವ ನೀರಿಗೂ ಸಮಸ್ಯೆ ಇದೆ :
ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ ಮಾತನಾಡಿ, ಶಾಸಕರು ಜಾತಿ, ಧರ್ಮಕ್ಕೆ ಸೀಮಿತವಾಗದೆ ಕೆಲಸ ಮಾಡುತಿದ್ದಾರೆ. ಯಗಚಿ ಅಣೆಕಟ್ಟಿನ ಸಮೀಪದಲ್ಲಿದ್ದರೂ ಹೆಬ್ಬಾಳು ಭಾಗದಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಇದೆ. ಆದ್ದರಿಂದ ಏತ ನೀರಾವರಿ ಯೋಜನೆಗೆ ಶಾಸಕರು ಹೆಚ್ಚಿನ ಗಮನ ಹರಿಸಬೇಕು ಎಂದರು.
ಗ್ರಾಪಂ ಆಡಳಿತಾಧಿಕಾರಿ ಹಾಗೂ ಸೆಸ್ಕ್ ಎಇಇ ಬಸವರಾಜ್, ಸಿಡಿಪಿಒ ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್, ಮಾಜಿ ಸದಸ್ಯರಾದ ಹಾಲೇಗೌಡ, ಪ್ರತಿಭಾ, ಧ್ರುವಕುಮಾರಿ, ಗೋಪಾಲಯ್ಯ, ದೇವಪ್ಪ, ಶೋಭಾ, ವೇದಾವತಿ, ಕಾರ್ಯದರ್ಶಿ ಅಶೋಕ್ ಕುಮಾರ್ ಇತರರಿದ್ದರು.