ಹೊಳೆನರಸೀಪುರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಎಚ್.ಎಂ.ರೇವಣ್ಣ, ಶ್ರೇಯಸ್ ಪಟೇಲ್, ಲಕ್ಷ್ಮಣ್, ಅನುಪಮಾ ಮಹೇಶ್, ಚಿಕ್ಕಡಲೂರು ಬಸವರಾಜು, ಎಲ್.ಡಿ.ಬಸವರಾಜು ಇತರರು ಇದ್ದರು. 
ಹಾಸನ

ಕೇಂದ್ರದಿಂದ ಸಿಬಿಐ, ಇಡಿ ದುರ್ಬಳಕೆ

ಅಭಿನಯ್ ಎಚ್.ಎಂ
ಹೊಳೆನರಸೀಪುರ : ಕೇಂದ್ರ ಸರ್ಕಾರ ಸಿಬಿಐ ಹಾಗೂ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷವನ್ನು ತುಳಿಯಲು ಹೊರಟಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ದೂರಿದರು.
ಎಸ್‌ಐಆರ್ ಸಂಬಂಧ ಕಾಂಗ್ರೆಸ್ ವತಿಯಿಂದ ಶುಕ್ರವಾರ ಪಟ್ಟಣದಲ್ಲಿ ಆಯೋಜಿಸಿದ್ದ ಬಿಎಲ್ಎ -2 ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿಯೊಂದಿಗೆ ತಾಲೂಕಿನ ಮಹಾನಾಯಕರು ಸೇರಿಕೊಂಡಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಕಾಂಗ್ರೆಸ್ ಪಕ್ಷವನ್ನು ಹುನ್ನಾರದಿಂದ ಮುಗಿಸಲು ಹೊರಟಿದ್ದು, ಇದು ಅವರ ಭ್ರಮೆ ಎಂದು ಟೀಕಿಸಿದರು.
ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್. ಆದರೆ ಅವರು ಅದನ್ನು ಮರೆತು ಕಾಂಗ್ರೆಸ್ ತುಳಿಯಲು ಹೊರಟಿರುವುದು ಕೃತಜ್ಞತೆ ಇಲ್ಲ ಎಂಬುದನ್ನು ತೋರುತ್ತದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ನವರಿಗೆ ಕಿರುಕುಳ, ಧಮ್ಕಿ ಹಾಕುವುದು, ದಬ್ಬಾಳಿಕೆ ಮಾಡುವುದು, ದ್ವೇಷ ಸಾಧಿಸುವುದು, ಪೊಲೀಸ್ ಕೇಸ್ ಮಾಡಿಸಿದರೂ, ಕಾಂಗ್ರೆಸ್ ಬೆಂಬಲಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಸಂಸದ ಶ್ರೇಯಸ್ ಎಂ.ಪಟೇಲ್ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು, ಮುಂದೆ ಉತ್ತಮ ರೀತಿ ಕೆಲಸ ಮಾಡಿಸುತ್ತಾರೆ ಎಂದರು.
ಸಂಸದ ಶ್ರೇಯಸ್ ಎಂ.ಪಟೇಲ್ ಮಾತನಾಡಿ, ಬಿಎಲ್ಎ- 2 ಅತ್ಯಂತ ಜಾಗರೂಕತೆಯಿಂದ ಶ್ರಮವಹಿಸಿ ಕೆಲಸ ನಿರ್ವಹಿಸಬೇಕು. ಎಸ್‌ಐಆರ್ ವಿಚಾರದಲ್ಲಿ ಯಾರೂ ಸಹ ಮೈ ಮರೆಯುವುದು ಬೇಡ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಹುಡ ಅಧ್ಯಕ್ಷ ಪಟೇಲ್ ಶಿವಪ್ಪ, ಕಾರ್ಯಾಧ್ಯಕ್ಷ ಜಿ.ಸಿ.ಶಶಿಧರ್, ಕೆಪಿಸಿಸಿ ಸದಸ್ಯ ಎಂ.ಎಸ್.ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಟಿ.ಲಕ್ಷ್ಮಣ್, ವಿಶ್ವನಾಥ್, ಮುಖಂಡರಾದ ಅನುಪಮಾ ಮಹೇಶ್, ಚಿಕ್ಕಡಲೂರು ಬಸವರಾಜು, ಎಲ್.ಡಿ.ಬಸವರಾಜು, ಬಿ.ಪಿ.ಮಂಜೇಗೌಡ, ಅದ್ದಿಹಳ್ಳಿ ಮಂಜುನಾಥ್, ಮುಜಾಹಿದ್ ಪಾಷಾ, ಬಿ.ಎಂ.ಬಸವರಾಜು, ಹರಿರಾಜು, ಎಚ್. ಆರ್.ಕೃಷ್ಣಮೂರ್ತಿ, ಎಚ್.ಎಸ್.ಕೃಷ್ಣಮೂರ್ತಿ, ಎಚ್.ಎನ್. ರಾಘವೇಂದ್ರ, ಕೆಆರ್‌ಜಿ ಬಾಬು, ಶಿವಕುಮಾರ್, ಶ್ರುತಿ ಇತರರಿದ್ದರು.