ಪಟ್ಟಣದ ಪ್ರವಾಸಿ ಮಂದಿರದಲ್ಲಿ ಲಯನ್ಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ನೆಪ್ಯೂನ್ ಮೈಂಡ್ ಪವರ್ ಲರ್ನಿಂಗ್ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಲಯನ್ಸ್ ಸಂಸ್ಥೆ ಅಧ್ಯಕ್ಷೆ ತಾರಾಮಣಿ ಸುರೇಶ್, ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ, ಕಾರ್ಯದರ್ಶಿ ಆದರ್ಶ ಇತರರಿದ್ದರು
- ಲಯನ್ಸ್ ಸಂಸ್ಥೆ ಅಧ್ಯಕ್ಷೆ ತಾರಾಮಣಿ ಸುರೇಶ್ ಅಭಿಪ್ರಾಯ
ಬೇಲೂರು: ನೆನಪಿನ ಶಕ್ತಿ ಹೆಚ್ಚಿಸುವ ಉದ್ದೇಶದಿಂದ ನೆಪ್ಯೂನ್ ಮೈಂಡ್ ಪವರ್ ಲರ್ನಿಂಗ್ ಸಿಸ್ಟಮ್ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಲಯನ್ಸ್ ಸಂಸ್ಥೆ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಲಯನ್ಸ್ ಸಂಸ್ಥೆ ಅಧ್ಯಕ್ಷೆ ತಾರಾಮಣಿ ಸುರೇಶ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಓದು ಮಾತ್ರವಲ್ಲದೆ ನೆನಪಿನ ಶಕ್ತಿ, ಏಕಾಗ್ರತೆ ಹಾಗೂ ತಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ನೆನಪಿನ ಶಕ್ತಿ ಹೆಚ್ಚಿಸುವ ತರಬೇತಿಗಳು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತವೆ. ಜತೆಗೆ ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗೆ ತಕ್ಕಂತೆ ಸರಿಯಾದ ಮಾರ್ಗದರ್ಶನ ಪಡೆದು ಶಿಸ್ತುಬದ್ಧ ಅಧ್ಯಯನ ರೂಡಿಸಿಕೊಂಡರೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಪಾಲಕರೂ ಮಕ್ಕಳ ಮೇಲೆ ಅತಿಯಾದ ಒತ್ತಡ ಹಾಕದೆ, ಅವರ ಆಸಕ್ತಿಗೆ ತಕ್ಕಂತೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ ಬೆಂಬಲ ನೀಡಬೇಕು ಎಂದರು.
ಲಯನ್ಸ್ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಚಂದ್ರಮೌಳಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ಮರಣ ಶಕ್ತಿ ಅಭಿವೃದ್ಧಿಪಡಿಸುವುದು ಕೇವಲ ಓದಿಗೆ ಮಾತ್ರವಲ್ಲದೆ ಜೀವನ ಪೂರ್ತಿ ಯಶಸ್ಸಿಗೆ ಅವಶ್ಯಕವಾಗಿದೆ. ಸರಿಯಾದ ತರಬೇತಿ ಹಾಗೂ ನಿರಂತರ ಅಭ್ಯಾಸದಿಂದ ಮೆದುಳಿನ ಸಾಮರ್ಥ್ಯ ಹೆಚ್ಚಿಸಬಹುದು. ಪಾಲಕರು ಮಕ್ಕಳಿಗೆ ಇಂತಹ ವೈಜ್ಞಾನಿಕ ತರಬೇತಿಗಳಿಗೆ ಅವಕಾಶ ಕಲ್ಪಿಸಬೇಕು. ಅಲ್ಲದೆ ನೆಪ್ಯೂನ್ ಮೈಂಡ್ ಪವರ್ ಲರ್ನಿಂಗ್ ಸಿಸ್ಟಮ್ ಮೂಲಕ ನೀಡುತ್ತಿರುವ ತರಬೇತಿ ವಿಧಾನಗಳು ವಿದ್ಯಾರ್ಥಿಗಳ ಅಧ್ಯಯನದ ಮೇಲಿನ ಆಸಕ್ತಿ ಹೆಚ್ಚಿಸುವುದಲ್ಲದೆ ಸೃಜನಶೀಲ ಚಿಂತನೆ ಮತ್ತು ತ್ವರಿತ ಗ್ರಹಣ ಶಕ್ತಿಯನ್ನು ವೃದ್ಧಿಸಲಿದೆ ಎಂದರು.
ಲಯನ್ಸ್ ಸಂಸ್ಥೆಯ ಕಾರ್ಯದರ್ಶಿ ಆದರ್ಶ, ಪ್ರೀತು ಚಂದ್ರಮೌಳಿ, ಸುನಿಲ್, ಇಂಗ್ಲಿಷ್ ಲಿಟ್ ನಿರ್ದೇಶಕ ಮತ್ತು ತರಬೇತುದಾರ ನೆಪ್ಯೂನ್ ಮೈಂಡ್ ಪವರ್ ಲರ್ನಿಂಗ್ ಸಿಸ್ಟಮ್ ಸುರೇಶ್ ಇದ್ದರು.