ಚನ್ನರಾಯಪಟ್ಟಣದ ಗಣಪತಿ ಪಂಡಾಲಿನಲ್ಲಿ ಆಯೋಜಿಸಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಹಾಗೂ ಯೋಗಪಟುಗಳು ಯೋಗಾಭ್ಯಾಸದಲ್ಲಿ ತೊಡಗಿರುವುದು.
ಚನ್ನರಾಯಪಟ್ಟಣ: ಭಾರತೀಯ ಸಂಸ್ಕೃತಿಯ ಹೆಮ್ಮೆಯಾದ ಯೋಗಾಭ್ಯಾಸದಿಂದ ದೇಹ ಮತ್ತು ಮನಸ್ಸನ್ನು ಜಯಿಸುವ ಶಕ್ತಿಯನ್ನು ರೂಢಿಸಿ ಕೊಳ್ಳಬಹುದಾಗಿದೆ ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಗಣಪತಿ ಆಸ್ಥಾನಮಂಟಪದಲ್ಲಿ ವಿವಿಧ ಯೋಗ ಕೇಂದ್ರಗಳನ್ನೊಳಗೊಂಡ ಯೋಗ ಒಕ್ಕೂಟ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಶ್ವಕ್ಕೆ ಯೋಗವನ್ನು ಪರಿಚಯಿಸಿದ ಹೆಗ್ಗಳಿಕೆ ಭಾರತದ್ದಾಗಿದೆ. ಶರೀರ ಮತ್ತು ಮನಸ್ಸನ್ನು ಪಳಗಿಸುವ ಸಾಮರ್ಥ್ಯವುಳ್ಳ ಯೋಗದ ನಿಯಮಿತ ಅಭ್ಯಾಸದ ಮೂಲಕ ಜನರು ಆತ್ಮ ನಿಯಂತ್ರಣ ಸಾಧಿಸಲು ಮುಂದಾಗಬೇಕು. ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳ ಸಂರಕ್ಷಣೆ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಬೇಕು. ನಮ್ಮ ತನವನ್ನು ಉಳಿಸಿಕೊಳ್ಳುವ ಮೂಲಕ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಸರಣೆಯಿಂದಾಗುತ್ತಿರುವ ಅನನುಕೂಲವನ್ನು ತಪ್ಪಿಸಲು ಮುಂದಾಗಬೇಕು ಎಂದರು.
ಯೋಗದಿಂದ ಮನಸ್ಸಿಗೆ ನೆಮ್ಮದಿ ದೊರೆಯುವುದಲ್ಲದೆ ಆರೋಗ್ಯ ಹಾಗೂ ಅಂಗಾಂಗದ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಯೋಗಬಲ್ಲವನಿಗೆ ರೋಗವಿಲ್ಲವೆಂಬ ಮಾತು ಸತ್ಯವಾಗಿದ್ದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲೂ ಇದು ಸಹಕಾರಿ ಎಂದರು.
ಪ್ರತಿಯೊಬ್ಬರೂ ನಿತ್ಯ ಒಂದು ಗಂಟೆ ಯೋಗಾಭ್ಯಾಸಕ್ಕಾಗಿ ತಮ್ಮ ಸಮಯವನ್ನು ಮೀಸಲಿಡಬೇಕು. ಇದರೊಂದಿಗೆ ಧ್ಯಾನ, ಪ್ರಾಣಾಯಾಮಗಳೂ ಹೆಚ್ಚು ಪರಿಣಾಮಕಾರಿಯಾಗಿದ್ದು ಪಟ್ಟಣದಲ್ಲಿ ಹೆಚ್ಚು ಹೆಚ್ಚು ಯೋಗಕೇಂದ್ರಗಳು ನಡೆಯುವಂತಾಗಲೆಂದು ಆಶಿಸಿದರು.
ಮಕ್ಕಳ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್ ಮಾತನಾಡಿ, ಜಗತಿಗೆ ಶ್ರೇಷ್ಠ ಕೊಡುಗೆಯನ್ನು ಯೋಗದ ಮೂಲಕ ನೀಡಿದ ಭಾರತ ಇತರ ದೇಶಗಳಿಗೆ ಮಾದರಿಯಾಗಿದೆ. ಒತ್ತಡದಿಂದ ಹೊರಬಂದು ಉತ್ತಮ ಜೀವನ ನಡೆಸಲು ಇದು ಸಹಕಾರಿಯಾಗಿದೆ. ಎಂದರು.
ಯೋಗಪಟು ಪ್ರಕಾಶ್ ಮಾತನಾಡಿದರು. ಜ್ಯೋತಿ ನಂದೀಶ್, ಸಿ.ಎಸ್.ಮನೋಹರ್, ಸಿ.ಪುಟ್ಟಸ್ವಾಮಿಗೌಡ, ಪ್ರಭಾಕರ್ ಇತರರಿದ್ದರು.
ಪಟ್ಟಣದಲ್ಲಿ ವಿವಿಧ ಸಂಘ, ಸಂಸ್ಥೆಗಳು, ಸರಕಾರಿ ಕಚೇರಿಗಳ ಸಿಬ್ಬಂದಿ ಪ್ರತ್ಯೇಕವಾಗಿ ಯೋಗ ಪ್ರದರ್ಶನದ ಮೂಲಕ ಆಚರಿಸಿದರು.