ನವಜಾತ ಶಿಶುವಿನೊಂದಿಗೆ ವೈದ್ಯ ವಿದ್ಯಾರ್ಥಿನಿಯರು. 
ಹಾಸನ

ರೈಲಿನಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿದ ವೈದ್ಯೆ ವಿದ್ಯಾರ್ಥಿನಿಯರು

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ರೈಲಿನಲ್ಲಿ ಸುರಕ್ಷಿತ ಹೆರಿಗೆ ಮಾಡಿಸಿದ ವೈದ್ಯೆ ವಿದ್ಯಾರ್ಥಿನಿಯರು
  • ತಾಯಿ-ಮಗುವಿನ ಜೀವ ಉಳಿಸಿ, ಕರ್ತವ್ಯ ಪ್ರಜ್ಞೆ ಮೆರೆದ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ ಮೂವರು ವಿದ್ಯಾರ್ಥಿನಿಯರು

ಹಾಸನ:

ಚಲಿಸುತ್ತಿದ್ದ ರೈಲಿನಲ್ಲಿ ಸುರಕ್ಷಿತ ಹೆರಿಗೆ ಮಾಡಿಸುವ ಮೂಲಕ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ತಾಯಿ-ಮಗುವಿನ ಜೀವ ಉಳಿಸಿ, ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

ನಗರದ ತಣ್ಣೀರುಹಳ್ಳದ ಶ್ರೀ ಧರ್ಮಸ್ಥಳ ಆಯುರ್ವೇದ ವೈದ್ಯಕೀಯ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ.ರಶ್ಮಿ ಬಿಳಗಿ, ಡಾ. ಎನ್.ಲತಾಶ್ರೀ ಹಾಗೂ ಡಾ. ಎಂ.ಶಾಹಿನ್ ಅವರು ರಾಷ್ಟ್ರೀಯಮಟ್ಟದ ಸಮ್ಮೇಳನದಲ್ಲಿ ಭಾಗವಹಿಸಲು ಹಾಸನದಿಂದ ವಾರಣಾಸಿಗೆ ಮಂಗಳವಾರ ರೈಲಿನಲ್ಲಿ ತೆರಳುತ್ತಿದ್ದರು.
ಈ ವೇಳೆ ಅದೇ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಮೂವರು ಕೂಡಲೇ ನೆರವಿಗೆ ಧಾವಿಸಿದ್ದಾರೆ.
ಸಹ ಪ್ರಯಾಣಿಕರ ಸಹಕಾರದೊಂದಿಗೆ ರೈಲಿನಲ್ಲಿಯೇ ಅಗತ್ಯ ವ್ಯವಸ್ಥೆ ಮಾಡಿಕೊಂಡು ಹೆರಿಗೆ ಪ್ರಕ್ರಿಯೆ ನಡೆಸಿದರು. ಹೆರಿಗೆಯ ವೇಳೆ ಮಗುವಿನ ಕುತ್ತಿಗೆಗೆ ಹೊಕ್ಕುಳ ಬಳ್ಳಿ ಸುತ್ತಿಕೊಂಡಿರುವುದನ್ನು ಗಮನಿಸಿ ಸುರಕ್ಷಿತವಾಗಿ ಬಿಡಿಸಿ ಮಗುವನ್ನು ಹೊರತೆಗೆದು ಹೆರಿಗೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಈಗ ತಾಯಿ ಮತ್ತು ನವಜಾತ ಶಿಶು ಆರೋಗ್ಯವಾಗಿದ್ದಾರೆ. ಘಟನೆಯ ಬಳಿಕ ಸಹ ಪ್ರಯಾಣಿಕರು ವೈದ್ಯೆಯರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.