ಅರಕಲಗೂಡು ತಾಲೂಕು ರಾಮನಾಥಪುರ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ನಡೆದ ಸಂಗಿತೋತ್ಸವದಲ್ಲಿ ವಿದುಷಿ ಡಾ. ಎನ್. ಜೆ. ನಂದಿನಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. 
ಹಾಸನ

ಸಂಗೀತ ಕಲೆ, ಸೆಲೆ ಬತ್ತದಿರಲಿ

ಅರಕಲಗೂಡು : ಜೀವನದ ಕಾಲಘಟ್ಟದಲ್ಲಿ ಮನಸ್ಸಿಗೆ ಮುದಕೊಡುವ ಸಂಗೀತ ಕಲೆ, ಸೆಲೆ ಬತ್ತದೆ ಜೀವಂತವಾಗಿರಲು ಸಂಗೀತಾರಾಧನೆ, ಸಂಗೀತೋತ್ಸವ ನಿರಂತರವಾಗಿ ನಡೆಯಲು ಎಲ್ಲರ ಸಹಕಾರ ಮುಖ್ಯ ಎಂದು ಶ್ರೀ ಪಟ್ಟಾಭಿರಾಮ ಸೇವಾ ಸಮಿತಿಯ ಲಕ್ಷ್ಮೀಕಾಶಿ ಹೇಳಿದರು.
ತಾಲೂಕಿನ ರಾಮನಾಥಪುರದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ಪಟ್ಟಾಭಿರಾಮ ದೇವಾಲಯದಲ್ಲಿ ನಡೆದ 9ನೇ ದಿನದ ಶ್ರೀ ರಾಮನವಮಿ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿಯ ಸಂಗೀತಾಭಿಮಾನಿಗಳ ಸೌಜನ್ಯ ಔದಾರ್ಯ ಸಂಗೀತದ ದೇವಗಂಗೆಯನ್ನು ಮನೆ ಬಾಗಿಲಿಗೆ ಹರಿಸಿದೆ. ಇಂತಹ ಸಂಗೀತ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತಿರುವುದು ಪ್ರಶಂಸನೀಯ ಎಂದರು.
ವಿದುಷಿ ಡಾ.ಎನ್.ಜೆ.ನಂದಿನಿ ಅವರು ಪ್ರಸ್ತುತಪಡಿಸಿದ ಗಾಯನಕ್ಕೆ ಸಂಗೀತಾಭಿಮಾನಿಗಳು ತಲೆದೂಗಿದರು.
ಮಲ್ಲರಾಜಪಟ್ಟಣದ ದಿ.ರಾಮಸ್ವಾಮಿ ಅಯ್ಯಂಗಾರ್ ಮಕ್ಕಳು, ಎಂ.ಆರ್.ಶ್ರೀನಿವಾಸ ಅಯ್ಯಂಗಾರ್ ಮತ್ತು ಸಹೋದರರು, ವೆಂಕಟೇಶ್ವರ ಅಯ್ಯಂಗಾರ್, ದಿ. ಎಂ.ಜೆ.ರಾಮಕೃಷ್ಣ ಅಯ್ಯಂಗಾರ್ ಮಕ್ಕಳು, ರಾಮಭದ್ರನ್ ಅವರು ಕಾರ್ಯಕ್ರಮ ಹಾಗೂ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ದೇವಾಲಯದ ಮುಖ್ಯ ಅರ್ಚಕ ವೇ. ಶ್ರೀನಿವಾಸ್ ಭಟ್ ಪೂಜಾ ಕೈಂಕರ್ಯ ನಡೆಸಿಕೊಟ್ಟರು.