ಫೋಟೋ ಸುದ್ದಿ : 3ರಲ್ಲಿ 01 ಹುಲಿಕೆರೆ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಹುಲಿಕೆರೆ ಸಂಪತ್‌ಕುಮಾರ್, ಆಶಾದೇವಿ ಪ್ರಕಾಶ್, ಹೊನ್ನಮ್ಮ ಧರಣಿ ಕುಮಾರ್, ತೋಪೇಗೌಡ ಇದ್ದರು.
- ಶಾಸಕ ಸಿ.ಎನ್.ಬಾಲಕೃಷ್ಣ
- ಹುಲಿಕೆರೆ ಗ್ರಾಮ
ನುಗ್ಗೇಹಳ್ಳಿ: ಹಳ್ಳಿಗಳನ್ನು ಅಭಿವೃದ್ಧಿಪಡಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು ಅರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಳ್ಳಿಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯ ಹುಲಿಕೆರೆ ಗ್ರಾಮದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ, ನೀರಾವರಿ ಯೋಜನೆಗಳಿಗೆ ಹೆಚ್ಚು ಶಕ್ತಿ ತುಂಬುತ್ತಿರುವುದರಿಂದ ಹಳ್ಳಿಗಳು ಅಭಿವೃದ್ಧಿಯಾಗುತ್ತಿವೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಿದರೆ ರೈತರು ಬೆಳೆಗಳಿಂದ ನಷ್ಟ ಹೊಂದುವುದನ್ನು ತಪ್ಪಿಸಬಹುದು ಇದರ ಜತೆಗೆ ಸೂಕ್ತ ಮಾರುಕಟ್ಟೆ ನಿರ್ಮಾಣಕ್ಕೆ ಹೆಚ್ಚು ಗಮನಹರಿಸಬೇಕು ಎಂದರು.
ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಅವರ ಮನವಿ ಮೇರೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದ ಕೈಗಾರಿಕಾ ವಲಯಕ್ಕೆ ಅನುದಾನ ನೀಡಿದ್ದಾರೆ. ಜತೆಗೆ ತೆಂಗು ಫಸಲು ಹಾಳಾದರೆ ವಿಶೇಷ ಪರಿಹಾರ ನೀಡಲು ಹಣ ಮೀಸಲಿಡಲಾಗಿದೆ ಎಂದರು.
ಹುಲಿಕೆರೆ ಗ್ರಾಮದ ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಕಟ್ಟಡ ನವೀಕರಣ, ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಗ್ರಾಮದ ವಿವಿಧ ರಸ್ತೆಗಳು ಹಾಗೂ ಒಳಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನ, ಜಲಜೀವನ್ ಯೋಜನೆಯ ಮೂಲಕ ಪ್ರತಿ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನುಗ್ಗೇಹಳ್ಳಿ ಕೃಷಿ ಪತ್ತಿನ ಮಾಜಿ ಅಧ್ಯಕ್ಷ ಹುಲಿಕೆರೆ ಸಂಪತ್‌ಕುಮಾರ್ ಮಾತನಾಡಿ, ಗ್ರಾಮದಿಂದ ಬಾಣನಕರೆ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಹಾಗೂ ಆಲದ ಮರದಮ್ಮ ದೇವಾಲಯ ಮುಂಭಾಗ ಗೋಪುರ ನಿರ್ಮಾಣ, ಗ್ರಾಮದಲ್ಲಿರುವ ಪುರಾತನ ಕಲ್ಯಾಣಿ ಅಭಿವೃದ್ಧಿಗೆ ಅನುದಾನ ನೀಡುವಂತೆ ಒತ್ತಾಯಿಸಿದರು.
ಗ್ರಾಪಂ ಸದಸ್ಯರಾದ ಆಶಾದೇವಿ ಪ್ರಕಾಶ್, ಹೊನ್ನಮ್ಮ ಧಣಿ ಕುಮಾರ್, ಅಂಗನವಾಡಿ ಶಿಕ್ಷಕಿ ಯಶೋದಾ, ಮುಖಂಡರಾದ ನಾಗಮಣಿ ಪ್ರಕಾಶ್, ಚಂದ್ರೇಗೌಡ, ತೋಪೇಗೌಡ, ಹೊನ್ನೇಗೌಡ, ನಾಗೇಶ್, ರೈತ ಸಂಘದ ಶಶಿಕಲಾ, ರೇಣುಕಾ ರಂಗಸ್ವಾಮಿ, ಶಿವಕುಮಾರ್, ದಿವಾಕರ್, ಮಲ್ಲೇಶ್, ನಟರಾಜ್, ಲಿಂಗರಾಜು, ವರದರಾಜ್, ಜಯಣ್ಣ, ಉಮೇಶ್, ಹರೀಶ್, ವೆಂಕಟೇಶ್ ಇತರರಿದ್ದರು.