ಬೇಲೂರಿನ ಅಂಬೇಡ್ಕರ್ ಪ್ರತಿಮೆ ಹಾಗೂ ಕೋರೆಗಾಂವ್ ವಿಜಯಿ ಸ್ಥಂಬಕ್ಕೆ ಶಾಸಕ ಎಚ್.ಕೆ.ಸುರೇಶ್ ಪುಷ್ಪ ನಮನ ಸಲ್ಲಿಸಿದರು. 
ಹಾಸನ

ಎಲ್ಲರೂ ಸಮಾನತೆ, ಸ್ವಾತಂತ್ರೃ ಸಂದೇಶ ಪಾಲಿಸಲಿ

ಪ್ರಮುಖ ಮುಖ್ಯಾಂಶಗಳು

  • ನಾಲ್ಕನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ
  • ತಾಲೂಕು ಕಚೇರಿ ಮುಂಭಾಗ
ಬೇಲೂರು: ನಾಲ್ಕನೇ ವರ್ಷದ ಭೀಮಾ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಗುರುವಾರ ಪಟ್ಟಣದ ತಾಲೂಕು ಕಚೇರಿ ಮುಂಭಾಗದ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವುದರ ಜತೆಗೆ ಭೀಮಾ ಕೋರೆಗಾಂವ್ ವಿಜಯ ಸ್ತಂಬಕ್ಕೆ ಗಣ್ಯರ ಸಮ್ಮುಖದಲ್ಲಿ ಶಾಸಕ ಎಚ್.ಕೆ.ಸುರೇಶ್ ಪುಷ್ಪನಮನ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಕಲಾತಂಡದೊಂದಿಗೆ ಮೆರವಣಿಗೆ ಹೊರಟ ಸಾವಿರಾರು ಅಂಬೇಡ್ಕರ್ ಅಭಿಮಾನಿಗಳು, ಡಿಜೆ ಸೌಂಡ್ ಹಾಗೂ ನಾಸಿಕ್ ಡೋಲುಗಳ ನಾದಕ್ಕೆ ನೃತ್ಯ ಮಾಡಿದರು. ಜತೆಗೆ ನೀಲಿ ಬಾವುಟಗಳೊಂದಿಗೆ ಜೈ ಭೀಮ್ ಘೋಷಣೆ ಕೂಗಿ ಡಿಜೆ ಸೌಂಡ್‌ಗೆ ಕುಣಿದು ಕುಪ್ಪಳಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಚ್.ಕೆ.ಸುರೇಶ್, 1818ರ ಜ.1ರಂದು ಭೀಮಾ ಕೋರೆಗಾಂವ್‌ನಲ್ಲಿ ನಡೆದ ಯುದ್ಧವು ದಲಿತ ಸಮುದಾಯದ ಶೌರ್ಯ, ಸ್ವಾಭಿಮಾನ ಮತ್ತು ಹೋರಾಟದ ಪ್ರತೀಕವಾಗಿದೆ. ವೀರ ಯೋಧರು 28 ಸಾವಿರ ಸೈನಿಕರನ್ನು ಎದುರಿಸಿ ಜಯ ಸಾಧಿಸಿದ್ದು ಈಗ ಇತಿಹಾಸ. ಇದು ಇಂದಿನ ಪೀಳಿಗೆಗೆ ಪ್ರೇರಣೆಯಾಗಬೇಕು ಎಂದರು.
ಸಮಾನತೆ, ಸ್ವಾತಂತ್ರೃ ಮತ್ತು ಸಹೋದರತ್ವದ ಸಂದೇಶಗಳನ್ನು ಎಲ್ಲರೂ ಅನುಸರಿಸಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯ ಕಾಪಾಡುವ ಹೊಣೆ ನಮ್ಮೆಲ್ಲರದ್ದು. ಕೋರೆಗಾಂವ್ ಕದನ ಭಾರತದ ಇತಿಹಾಸದಲ್ಲೇ ಮಹತ್ವದ್ದಾಗಿದ್ದು ಇತಿಹಾಸ ಪುಟದಲ್ಲಿ ಉಳಿದಿದೆ. ಇಂತಹ ವಿಜಯೋತ್ಸವ ಕಾರ್ಯಕ್ರಮವನ್ನು ಬೇಲೂರಿನಲ್ಲಿ ಅದ್ದೂರಿಯಾಗಿ ಆಚರಿಸುತ್ತಿರುವುದು ಸಂತೋಷ ವಿಚಾರ ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ, ಜಿಪಂ ಮಾಜಿ ಅಧ್ಯಕ್ಷೆ ಜಿ.ಟಿ.ಇಂದಿರಾ, ಸದಸ್ಯೆ ಲತಾ ಮಂಜೇಶ್ವರಿ, ತಾಪಂ ಮಾಜಿ ಸದಸ್ಯರಾದ ಪರ್ವತಯ್ಯ, ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಪುರಸಭೆ ಸದಸ್ಯ ಜಮಾಲುದ್ದೀನ್, ಕೋರೆಗಾಂವ್ ವಿಜಯೋತ್ಸವ ಸಮಿತಿ ಅಧ್ಯಕ್ಷರಾದ ಅಶೋಕ್, ಸತೀಶ್, ಗೌರವಾಧ್ಯಕ್ಷರಾದ ಲಕ್ಷ್ಮಣ್, ರಮೇಶ್, ಎಂ.ಜಿ.ವೆಂಕಟೇಶ್, ರಾಮೇನಹಳ್ಳಿ ವೆಂಕಟೇಶ್, ಹೊಸಳ್ಳಿ ರಾಜು, ಗಂಗಾಧರ್ ಬಹುಜನ್, ವಸಂತ್ ಕುಮಾರ್, ಹೊಸಳ್ಳಿ ರಾಜು, ರಮೇಶ್ ಇತರರಿದ್ದರು.