ಬಾಬಾ ಸಾಹೇಬ್ ಅಂಬೇಡ್ಕರ್ ಪರಿ ನಿರ್ವಾಣ ದಿನದ ಅಂಗವಾಗಿ ಹೊಳೆನರಸೀಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ಅರಳಿಕಟ್ಟೆ ವೃತ್ತದ ಬಳಿ ಇರುವ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ ಮೇಣದ ಬತ್ತಿ ಹಚ್ಚಿದರು. ಶಿವಶಂಕರ್, ಲಕ್ಷ್ಮಣ್, ಮನು, ರಮೇಶ್ ಇದ್ದರು.
ಹೊಳೆನರಸೀಪುರ: ವಿಶ್ವಕ್ಕೆ ಮಾದರಿಯಾಗಿರುವ ಅದ್ಭುತ ಸಂವಿಧಾನವನ್ನು ರಚಿಸಿ ನಮ್ಮ ದೇಶಕ್ಕೆ ಅರ್ಪಣೆ ಮಾಡಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ದೇಶದ ಕೋಟ್ಯಂತರ ಜನರು ನಿತ್ಯವೂ ಸ್ಮರಿಸಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಲಕ್ಷ್ಮಣ ತಿಳಿಸಿದರು.
ಬಾಬಾ ಸಾಹೇಬರ ಪರಿ ನಿರ್ವಾಣ ದಿನದ ಅಂಗವಾಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ಅರಳಿಕಟ್ಟೆ ವೃತ್ತದ ಬಳಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆ ಮುಂದೆ ಶನಿವಾರ ಮೇಣದ ಬತ್ತಿ ಹಚ್ಚಿ ಮಾತನಾಡಿದರು.
ಬಾಬಾ ಸಾಹೇಬರು ರಚಿಸಿರುವ ಸಂವಿಧಾನದ ಅಡಿಯಲ್ಲಿ ನಮ್ಮ ದೇಶ ಸನ್ಮಾರ್ಗದಲ್ಲಿ ಸಾಗುತ್ತಿದ್ದು, ಪ್ರತಿಯೊಂದು ವರ್ಗಕ್ಕೂ ಮೀಸಲಾತಿಯನ್ನು ಕಲ್ಪಿಸಿಕೊಡುವುದರ ಮೂಲಕ ಎಲ್ಲರೂ ತಮ್ಮ ಹಕ್ಕುಗಳ ಮತ್ತು ಕರ್ತವ್ಯದ ಮಹತ್ವವನ್ನು ಅರಿತು ತಮ್ಮ ಬದುಕನ್ನು ಹಸನಾಗಿಸಿಕೊಳ್ಳಲು ಪೂರಕವಾಗಿ ಸರ್ಕಾರದ ವತಿಯಿಂದ ಸಿಗಬಹುದಾದ ಸವಲತ್ತುಗಳನ್ನು ಪಡೆದುಕೊಳ್ಳಲು ಪ್ರಮುಖ ಕಾರಣಕರ್ತರಾಗಿದ್ದಾರೆ. ಅವರು ಕೋಟ್ಯಂತರ ಜನರ ಅಮೂಲ್ಯ ಆಸ್ತಿ ಎಂದರು.
ಪುರಸಭಾ ಮುಖ್ಯಾಧಿಕಾರಿ ಶಿವಶಂಕರ್ ಮಾತನಾಡಿ, ಬಾಬಾ ಸಾಹೇಬರನ್ನು ನಾವು ಸ್ಮರಿಸುವುದಕ್ಕೆ ಪುಣ್ಯ ಮಾಡಿದ್ದು, ಅವರು ಸಂವಿಧಾನದ ಅಡಿಯಲ್ಲಿ ದೊರಕಿಸಿಕೊಟ್ಟಿರುವ ಅವಕಾಶದಿಂದ ನಾವು ಅಧಿಕಾರಿಗಳಾಗಿ ತಮ್ಮ ಮುಂದೆ ನಿಂತು ಮಾತನಾಡುವುದಕ್ಕೆ ಅವಕಾಶವಾದಂತಾಗಿದೆ. ಬಾಬಾ ಸಾಹೇಬರಿಗೆ ನಮ್ಮ ಉಸಿರು ಇರುವವರೆಗೂ ನಾವು ನೀವುಗಳೆಲ್ಲರೂ ಋಣಿಯಾಗಿರಬೇಕು ಎಂದು ಹೇಳಿದರು.
ಪುರಸಭೆಯ ಸಿಬ್ಬಂದಿಮನು, ರಮೇಶ್ ಸೇರಿದಂತೆ ಸ್ಥಳೀಯ ಕೆಲವು ಪ್ರಮುಖರು ಹಾಜರಿದ್ದರು.