ಎಚ್.ಕೆ.ಕುಮಾರಸ್ವಾಮಿ 
ಹಾಸನ

ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಭಾರಿ ಅಕ್ರಮ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಭಾರಿ ಅಕ್ರಮ
  • ಸಮಿತಿಗಳ ರದ್ದುಪಡಿಸಲು ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಒತ್ತಾಯ
ಹಾಸನ: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಭಾರಿ ಅಕ್ರಮ ನಡೆದಿದ್ದು, ಈ ಸಮಿತಿಗಳನ್ನೇ ರದ್ದುಪಡಿಸಬೇಕು ಎಂದು ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಒತ್ತಾಯಿಸಿದರು.
ಗೃಹಲಕ್ಷ್ಮೀ ಸೇರಿ ಇತರೆ ಗ್ಯಾರಂಟಿ ಯೋಜನೆಗಳಲ್ಲಿ ಭಾರಿ ಅಕ್ರಮ ನಡೆದಿದ್ದರೂ, ಅನುಷ್ಠಾನ ಸಮಿತಿ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಸಿಐಜಿ ವರದಿ ಸಹ ಅಕ್ರಮಗಳನ್ನು ಬಿಚ್ಚಿಟ್ಟಿದೆ. ಈ ನಡುವೆ ವಾರ್ಡ್‌ವಾರು ಸಮಿತಿ ಮಾಡುವ ಬಗ್ಗೆ ಸಿಎಂ ಹೇಳಿಕೆ ನೀಡಿದ್ದಾರೆ. ಜನರ ತೆರಿಗೆ ಹಣ ಯಾರ ಸ್ವತ್ತು? ಸಮಿತಿ ಸದಸ್ಯರು ರಾಜಕೀಯ, ಸಂಬಳಕ್ಕೆ ಇದ್ದಾರೆಯೇ ಎಂದು ಪ್ರಶ್ನಿಸಿದರು.
239 ತಾಲೂಕುಗಳಲ್ಲಿ ಸಮಿತಿ ಇದ್ದರೂ ಪ್ರಯೋಜನವಿಲ್ಲ. ಈ ಸರ್ಕಾರ ಜಾಹೀರಾತು ನೀಡುವಲ್ಲಿಯೂ ಅಕ್ರಮ ನಡೆದಿರುವ ಬಗ್ಗೆ ವರದಿ ಆಗಿದೆ. 52 ಸಾವಿರ ಕೋಟಿ ಪ್ರತಿವರ್ಷ ಗ್ಯಾರಂಟಿಗೆ ಖರ್ಚಾಗುತ್ತಿದ್ದು, ಆ ದುಡ್ಡು ಎಲ್ಲಿ ಹೋಯಿತು ಎಂದರು.
ಪ್ರತಿ ತಾಲೂಕಿನ ಅಂಕಿ ಅಂಶ ಬಿಡುಗಡೆ ಮಾಡಲಿ, ಅಧಿಕಾರಿಗಳು, ಗ್ಯಾರಂಟಿ ಸಮಿತಿ ಶಾಮೀಲಾಗಿ ಅಕ್ರಮ ಮಾಡಿದೆ. ಸರ್ಕಾರಕ್ಕೆ ನೈತಿಕತೆ ಇದ್ದರೆ ಗ್ಯಾರಂಟಿ ಸಮಿತಿಗಳನ್ನು ರದ್ದು ಮಾಡಬೇಕು. ಹೊಸದಾಗಿ ಯಾವ ಸಮಿತಿಯನ್ನೂ ಮಾಡಬಾರದು ಎಂದು ಒತ್ತಾಯಿಸಿದರು.
ಭ್ರಷ್ಟರಹಿತ ಕರ್ನಾಟಕ ನಿರ್ಮಾಣದ ಕನಸು ಕಂಡ ಸಿಎಂ ನಡೆ ಸ್ವಾಗತಾರ್ಹ. ಆದರೆ ಅದನ್ನು ಹೇಗೆ ಮಾಡುತ್ತಾರೆ ಎನ್ನುವುದನ್ನು ಹೇಳಲಿ ಎಂದು ಆಗ್ರಹಿಸಿದರು.
ಇದೇ ವೇಳೆ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ಕೇಂದ್ರ ಸಚಿವರಾದ ಎಚ್. ಡಿ.ಕುಮಾರಸ್ವಾಮಿ, ಅನಿತಾ, ನಿಖಿಲ್ ಬಗ್ಗೆ ಪೋಸ್ಟ್ ಮಾಡುವುದನ್ನು ಕಾಂಗ್ರೆಸ್‌ನವರು ಬಿಡಬೇಕು. ಅಕ್ರಮ ನಡೆಸಿದ್ದರೆ ತನಿಖೆ ಮಾಡಲಿ ಎಂದರು. ಕೃಷಿಯೇತರ ಭೂಮಿಯಲ್ಲಿ ಟೌನ್‌ಶಿಪ್ ಮಾಡಲಿ. ಅದನ್ನು ಬಿಟ್ಟು ಫಲವತ್ತಾದ ಕೃಷಿ ಭೂಮಿಯಲ್ಲಿ ಈ ಕೆಲಸ ಸಲ್ಲದು, ರೈತರ ಕತ್ತು ಕೊಯ್ಯುವ ಕೆಲಸ ಆಗಬಾರದು ಎಂದರು.
ಬೇಲೂರಿನ ಬಗರ್ ಹುಕುಂ ಅಕ್ರಮ ಈಗಿನದಲ್ಲ. ಇಷ್ಟು ವರ್ಷ ಸುಮ್ಮನಿದ್ದು ಈಗ ಏಕೆ ಮುನ್ನೆಲೆಗೆ ಬಂತು ಎಂಬುದು ಗೊತ್ತಿಲ್ಲ. ಇದರ ಹಿಂದೆ ರಾಜಕೀಯ ವಾಸನೆ ಬರುತ್ತಿದೆ. ಲಿಂಗೇಶ್ ಅವರನ್ನು ಬಂಧಿಸಿರುವುದು ಕಾನೂನು ಪ್ರಕ್ರಿಯೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ತನಿಖೆ ಚುರುಕಾಗಿ ನಡೆದು ಬೇಗ ವರದಿ ನೀಡಲಿ. ಲಿಂಗೇಶ್ ನಿರಪರಾಧಿ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ದ್ಯಾವೇಗೌಡ, ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ, ಮುಖಂಡರಾದ, ಶೇಷಾದ್ರಿ, ಸಮೀರ್ ಇದ್ದರು.