ಹಗರೆ ಸತ್ಯನಾರಾಯಣ ಸ್ವಾಮಿ ಕಲ್ಯಾಣಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಹಗರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ದೇಶದಲ್ಲೇ ಬಹುದೊಡ್ಡ ಕ್ಷೇತ್ರವಾಗಿ ಹೊರಹೊಮ್ಮಿದೆ. ಪ್ರತಿಯೊಬ್ಬರೂ ಸಂಘಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಶ್ರೀ ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಹಗರೆಯ ಸತ್ಯನಾರಾಯಣ ಕಲ್ಯಾಣಮಂಟಪದಲ್ಲಿ ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಹಗರೆ ವಲಯದಿಂದ ಏರ್ಪಡಿಸಿದ್ದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕ್ಷೇತ್ರದ ಧರ್ಮ ಕಾರ್ಯಗಳು ಸಂಘದ ಕೆಲಸಗಳು ರಾಜ್ಯದಲ್ಲೇ ಮೊದಲೆನಿಸಿದೆ. ಮನುಷ್ಯನಲ್ಲಿ ದ್ವೇಷ ಹೆಚ್ಚಾಗುತ್ತಿದ್ದು ನಮ್ಮ ನಮ್ಮಲ್ಲೇ ಒಡೆದಾಳುವ ಸ್ಥಿತಿ ಬಂದೊದಗಿದೆ. ಇದರ ನಿಯಂತ್ರಣ ಬಹುಮುಖ್ಯ. ಕಷ್ಟಗಳು ಹೇಗೆ ಬರುತ್ತವೆ, ಯಾರಿಂದ ಬರುತ್ತವೆ ಎಂದು ತಾಯಂದಿರು ಯೋಚಿಸಬೇಕಿದೆ. ಯಾವುದೇ ಕಷ್ಟಗಳಿಗೂ ಮೂಲ ನಮ್ಮ ಮಕ್ಕಳು ಮನೆಯವರು ಎಂಬುದು. ಕಾರಣ ನಮ್ಮಲ್ಲಿರುವ ದುರಾಸೆಗಳಿಂದಾಗಿ. ಮನುಷ್ಯನಿಗೆ ಪ್ರೀತಿ ಇದ್ದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ. ದ್ವೇಷ, ಅಸೂಯೆ ಹುಟ್ಟಿದರೆ ಸಮಸ್ಯೆಗಳು ಉದ್ಭವಿಸುತ್ತವೆ. ಆಸೆ ದುರಾಸೆಯಾಗುವುದು ವಿಷದ ಸಮಾನ. ಅದಕ್ಕಾಗಿಯೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸಾಮಾಜಿಕವಾಗಿ ಜಾಗೃತಿ ಮೂಡಿಸುತ್ತಿದೆ ಎಂದರು.
ಸಂಘದ ಜಿಲ್ಲಾ ನಿರ್ದೇಶಕ ಸುರೇಶ್ ಮೊಯ್ಲಿ ಮಾತನಾಡಿ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗಾಂಧೀಜಿ ಕಂಡ ಕನಸನ್ನು ಈಡೇರಿಸುವ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ. ರಾಜ್ಯದಲ್ಲಿ ಒಟ್ಟು ಐದು ಲಕ್ಷದ ಹದಿನಾಲ್ಕು ಸಾವಿರ ಸ್ವಸಹಾಯ ಸಂಘಗಳಿದ್ದು 73 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ ಎಂದರು.
ಕಾಂತಾಮಣಿ ಕಾಂತರಾಜು, ಅರ್ಚಕ ಶಶಿಧರ ಭಟ್, ಮಂಜೇಗೌಡ, ತಾಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಬಸವರಾಜ್, ಭೀಮಣ್ಣ, ಎಂ.ರೇವಣ್ಣಯ್ಯ, ಸೋಮಶೇಖರ್, ಡಿಶಾಂತ್ ಕುಮಾರ್, ರಾಮಕೃಷ್ಣೇಗೌಡ, ಶೇಖರ್ ಗೌಡ, ಮೋಹನ್, ಗ್ರಾಮಾಭಿವೃದ್ಧಿ ಸಂಘದ ಬೇಲೂರು ತಾಲೂಕು ಯೊಜನಾಧಿಕಾರಿ ಟಿ.ಮಂಜುಳಾ, ಹಗರೆ ವಲಯದ ಮೇಲ್ವಿಚಾರಕ ಚಂದ್ರಶೇಖರ್, ಸೇವಾ ಪ್ರತಿನಿಧಿಗಳು, ತರಬೇತಿ ಸಹಾಯಕ ರುದ್ರೇಶ್ ಇದ್ದರು.