ಗುಂಪಿನಿಂದ ಬೇರಾದ ಆನೆ ಮರಿ ಕುಂಬಾರಳ್ಳಿಯ ರಸ್ತೆಯಲ್ಲಿ ನಿಂತಿರುವುದು. 
ಹಾಸನ

ಕಾಡಾನೆಗಳ ಹಿಂಡಿನಿಂದ ಬೇರಾದ ಮರಿಯಾನೆ

ಬೇಲೂರು: ತಾಲೂಕಿನ ಕುಂಬಾರಳ್ಳಿಯಲ್ಲಿ ಭಾನುವಾರ ಕಾಡಾನೆಗಳ ಹಿಂಡಿನಿಂದ ಬೇರಾದ ಮರಿಯಾನೆಯೊಂದು ಗಾಬರಿಯಿಂದ ಜನವಸತಿ ಹಾಗೂ ಜಮೀನುಗಳಲ್ಲಿ ಓಡಾಡಿ ಆತಂಕ ಮೂಡಿಸಿತು.
ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕೆಲ ತಿಂಗಳಿಂದ ಕಾಡಾನೆಗಳು ಬೀಡು ಬಿಟ್ಟಿವೆ. ಅಲ್ಲದೆ ಕಾಡಾನೆಗಳ ಹಿಂಡು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಹಿಂಡಿನಲ್ಲಿ ಸಾಗುತಿದ್ದ ಸಂದರ್ಭ ಆಕಸ್ಮಿಕವಾಗಿ ಹಿಂಡಿನಿಂದ ತಪ್ಪಿಸಿಕೊಂಡ ಮರಿ ಆನೆಯೊಂದು ಕುಂಬಾರಳ್ಳಿ ಗ್ರಾಮದೊಳಗೆ ನುಗ್ಗಿ ಮನೆಗಳ ಸಮೀಪವೇ ಎಲ್ಲೆಂದರಲ್ಲಿ ಓಡಾಡಿದೆ. ಜತೆಗೆ ಸಮೀಪದ ತೋಟದ ರಸ್ತೆ, ಗದ್ದೆಗಳಿಗೂ ತೆರಳಿ ವಾಸದ ಮನೆಗಳ ಸಮೀಪಕ್ಕೆ ಬಂದಿದ್ದರಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು.
ಅಲ್ಲದೆ ಮರಿಯಾನೆಗೆ ಎಲ್ಲಿಗೆ ಹೋಗಬೇಕೆಂದು ದಾರಿ ತಿಳಿಯದೆ ಕಂಗಾಲಾದಂತಿತ್ತು. ಗ್ರಾಮದ ರಸ್ತೆ ಮತ್ತು ತೋಟಗಳಲ್ಲಿ ಆನೆ ಮರಿ ಓಡಾಡುತ್ತಿರುವುದನ್ನು ಕಂಡ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರಿಂದ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಗ್ರಾಮಸ್ಥರ ಸಹಕಾರದೊಂದಿಗೆ ಮರಿ ಆನೆಯನ್ನು ಮರಳಿ ಕಾಡಾನೆಗಳ ಗುಂಪಿನತ್ತ ಓಡಿಸಿದರು.