ಫಿಟ್ ಹಾಸನ್ ಮ್ಯಾರಥಾನ್ ನಮ್ಮ ನಡೆ ಆರೋಗ್ಯದ ಕಡೆ ಕಾರ್ಯಕ್ರಮಕ್ಕೆ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಎದುರು ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ಶಾಸಕ ಎಚ್.ಪಿ.ಸ್ವರೂಪ್ ಚಾಲನೆ ನೀಡಿದರು. ಐ.ಜಿ.ಗಿರೀಶ್ ಕುಮಾರ್, ರಂಗೇಗೌಡ, ಕೆಂಚಮಾರನಹಳ್ಳಿ ಕಾಂತರಾಜು, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಗೌರವಾಧ್ಯಕ್ಷ ಡಾ.ಸಿ.ಎನ್.ಜಗದೀಶ್, ಜಿ.ಸಿ.ಧರ್ಮರಾಜ್, ರಾಜೇಶ್ ಇತರರಿದ್ದರು. 
ಹಾಸನ

ಆರೋಗ್ಯ ಜಾಗೃತಿಗೆ ಮ್ಯಾರಥಾನ್ ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಆರೋಗ್ಯ ಜಾಗೃತಿಗೆ ಮ್ಯಾರಥಾನ್ ಸಹಕಾರಿ
  • ಶ್ರೀ ಶಂಭುನಾಥ ಸ್ವಾಮೀಜಿ ಅಭಿಮತ
  • ಫಿಟ್ ಹಾಸನ್ ಮ್ಯಾರಥಾನ್ ನಮ್ಮ ನಡೆಗೆ ಚಾಲನೆ

ಹಾಸನ:

ಆರೋಗ್ಯಕರ ಜೀವನಶೈಲಿ, ದೈಹಿಕ ಸದೃಢತೆ ಹಾಗೂ ಪರಿಸರ ಜಾಗೃತಿಯನ್ನು ಸಮಾಜದಲ್ಲಿ ಬೆಳೆಸುವ ಉದ್ದೇಶದಿಂದ ಕುವೆಂಪು ಯುವಕರ ಸಂಘ ಹಾಸನ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಫಿಟ್ ಹಾಸನ್ ಮ್ಯಾರಥಾನ್ ನಮ್ಮ ನಡೆ... ಆರೋಗ್ಯದ ಕಡೆ ಕಾರ್ಯಕ್ರಮಕ್ಕೆ ನಗರದ ಎಂ.ಜಿ. ರಸ್ತೆಯಲ್ಲಿರುವ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಎದುರು ಶ್ರೀ ಶಂಭುನಾಥ ಸ್ವಾಮೀಜಿ ಹಾಗೂ ಶಾಸಕ ಎಚ್.ಪಿ. ಸ್ವರೂಪ್ ಚಾಲನೆ ನೀಡಿದರು.

ನಂತರ ಮಾತನಾಡಿದ ಶ್ರೀ ಶಂಭುನಾಥ ಸ್ವಾಮೀಜಿ, ಆರೋಗ್ಯವೇ ಜೀವನದ ಅಮೂಲ್ಯ ಸಂಪತ್ತು ಎಂಬ ಸಂದೇಶವನ್ನು ಸಾರಿದ ಈ ಮ್ಯಾರಥಾನ್ ಸಾರ್ವಜನಿಕರ ಗಮನ ಸೆಳೆಯಿತು. ಆರೋಗ್ಯಕರ ದೇಹದಲ್ಲೇ ಆರೋಗ್ಯಕರ ಮನಸ್ಸು ನೆಲೆಸಿರುತ್ತದೆ. ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ನಿಯಮಿತ ವ್ಯಾಯಾಮ, ಯೋಗ, ಶಿಸ್ತುಬದ್ಧ ಜೀವನ ಹಾಗೂ ಪ್ರಕೃತಿ ಸ್ನೇಹಿ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಯುವಜನರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಲಿ ಎಂದರು.

ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹೃದಯಾಘಾತ ಸೇರಿದಂತೆ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅನಿಯಮಿತ ಆಹಾರ ಪದ್ಧತಿ, ಮಾನಸಿಕ ಒತ್ತಡ, ದೈಹಿಕ ಚಟುವಟಿಕೆಯ ಕೊರತೆ, ಧೂಮಪಾನ, ಮದ್ಯಪಾನ ಸೇರಿದಂತೆ ದುಶ್ಚಟಗಳು ಹಾಗೂ ಪರಿಸರ ಮಾಲಿನ್ಯ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಇಂತಹ ಸಂದರ್ಭದಲ್ಲಿ ಜನರಲ್ಲಿ ಆರೋಗ್ಯಕರ ಬದುಕಿನ ಬಗ್ಗೆ ಅರಿವು ಮೂಡಿಸಲು ಆಯೋಜಿಸಿರುವ ಫಿಟ್ ಹಾಸನ್ ಮ್ಯಾರಥಾನ್ ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮವಾಗಿದೆ ಎಂದರು.
ಪ್ರತಿಯೊಬ್ಬರೂ ದಿನನಿತ್ಯ ಕನಿಷ್ಠ ಅರ್ಧ ಗಂಟೆಯಾದರೂ ವಾಕಿಂಗ್, ಜಾಗಿಂಗ್ ಅಥವಾ ವ್ಯಾಯಾಮವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು. ನಿಯಮಿತ ದೈಹಿಕ ಚಟುವಟಿಕೆಯಿಂದ ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹ, ರಕ್ತದೊತ್ತಡ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ಯುವಜನರು ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಿಗೆ ಸೀಮಿತರಾಗದೆ ಕ್ರೀಡೆ ಮತ್ತು ವ್ಯಾಯಾಮದತ್ತ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಮ್ಯಾರಥಾನ್‌ನಲ್ಲಿ ಪುರುಷರಿಗೆ 5 ಕಿ.ಮೀ. ಹಾಗೂ ಮಹಿಳೆಯರಿಗೆ 3 ಕಿ.ಮೀ. ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ವಿವಿಧ ವಯೋಮಾನದ ಸ್ಪರ್ಧಿಗಳು ಉತ್ಸಾಹದಿಂದ ಓಟದಲ್ಲಿ ಪಾಲ್ಗೊಂಡು ಗಮನ ಸೆಳೆದರು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುವೆಂಪು ಯುವಕರ ಸಂಘದ ವತಿಯಿಂದ ಆರೋಗ್ಯ ಮತ್ತು ಪರಿಸರ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ನಗರದ ವಿವಿಧ ಸಂಘ-ಸಂಸ್ಥೆಗಳು, ಪೊಲೀಸ್ ಇಲಾಖೆ, ಕ್ರೀಡಾ ಸಂಘಟನೆಗಳು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಕುವೆಂಪು ಯುವಕರ ಸಂಘದ ಅಧ್ಯಕ್ಷ ಐ.ಜಿ.ಗಿರೀಶ್‌ಕುಮಾರ್, ರಂಗೇಗೌಡ, ಕೆಂಚಮಾರನಹಳ್ಳಿ ಕಾಂತರಾಜು, ಒಕ್ಕಲಿಗರ ಸಂಘದ ನಿರ್ದೇಶಕ ಸುಮುಖ ರಘು, ಕುವೆಂಪು ಯುವಕರ ಸಂಘದ ಗೌರವಾಧ್ಯಕ್ಷ ಡಾ. ಸಿ.ಎನ್. ಜಗದೀಶ್, ಜಿ.ಸಿ. ಧರ್ಮರಾಜ್, ರಾಜೇಶ್, ದಯಾನಿಧಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನ ಗಿರೀಶ್ ಇತರರಿದ್ದರು.