ಪಲ್ಸ್ ಪೋಲಿಯೋ ಅಭಿಯಾನ ಅಂಗವಾಗಿ ಶುಕ್ರವಾರ ಬೇಲೂರು ತಾಲೂಕು ಕಚೇರಿ ಸಭಾಮಗಣದಲ್ಲಿ ಕರೆಯಲಾಗಿದ್ದ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿದರು. ತನ್ವೀರ್ ಪಾಷಾ. ಡಾ.ಸತೀಶ್ ಇತರರು ಇದ್ದರು.  
ಹಾಸನ

ಪಲ್ಸ್ ಪೋಲಿಯೋ ಅಭಿಯಾನ ಯಶಸ್ವಿಗೊಳಿಸಿ

ರವಿಕುಮಾರ್ ಪಿ. ಕೆ
ಬೇಲೂರು: ತಾಲೂಕಿನಲ್ಲಿ ಜೂನ್ 28ರಂದು ನಡೆಯಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ತಾಲೂಕು ಕಚೇರಿ ಶಿರಸ್ತೇದಾರ್ ತನ್ವೀರ್ ಪಾಷಾ ಹೇಳಿದರು.
ಜೂನ್ 28ರಂದು ನಡೆಯಲಿರುವ ಪಲ್ಸ್ ಪೋಲಿಯೋ ಅಂಗವಾಗಿ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆಯಲಾಗಿದ್ದ ವಿವಿಧ ಇಲಾಖೆ ಅಧಿಕಾರಿಗಳ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಪೋಲಿಯೋ ಹನಿ ನೀಡುವ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದ್ದು, ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯ್ ಮಾತನಾಡಿ, ಬೇಲೂರು ತಾಲೂಕಿನಲ್ಲಿ ಐದು ವರ್ಷದೊಳಗಿನ 10,452 ಮಕ್ಕಳಿದ್ದು ಅವರಿಗೆ ಲಸಿಕೆ ನೀಡಲು ಗ್ರಾಮೀಣ ವ್ಯಾಪ್ತಿಯಲ್ಲಿ 86 ಬೂತ್‌ಗಳು, 3 ಟ್ರಾನ್ಸಿಟ್ ಬೂತ್‌ಗಳು ಹಾಗೂ ಪಟ್ಟಣ ಪ್ರದೇಶದಲ್ಲಿ 10 ಬೂತ್‌ಗಳು ಕಾರ್ಯನಿರ್ವಹಿಸಲಿವೆ. ಪಲ್ಸ್ ಪೋಲಿಯೋ ಕಾರ್ಯಕ್ರಮದ ದಿನ ಐದು ವರ್ಷದೊಳಗಿನ ಪ್ರತಿಯೊಬ್ಬ ಮಗುವಿಗೂ ಎರಡು ಹನಿ ಪೋಲಿಯೋ ಲಸಿಕೆ ನೀಡುವುದು ಅಗತ್ಯವಾಗಿದೆ. ಪಾಲಕರು ತಮ್ಮ ಮಕ್ಕಳನ್ನು ಸಮೀಪದ ಬೂತ್‌ಗೆ ಕರೆತಂದು ಲಸಿಕೆ ಹಾಕಿಸಬೇಕು. ಈಗಾಗಲೇ ಹಲವು ಬಾರಿ ಲಸಿಕೆ ಪಡೆದ ಮಕ್ಕಳಿಗೂ ಈ ವಿಶೇಷ ಕಾರ್ಯಕ್ರಮದಡಿ ಮತ್ತೆ ಲಸಿಕೆ ನೀಡುವುದು ಸುರಕ್ಷಿತ ಹಾಗೂ ಅವಶ್ಯಕವಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸತೀಶ್ ಮಾತನಾಡಿ, ಪೋಲಿಯೋ ಒಂದು ಅಪಾಯಕಾರಿ ವೈರಸ್ ಜನ್ಯ ಕಾಯಿಲೆಯಾಗಿದ್ದು, ಮುಖ್ಯವಾಗಿ ಐದು ವರ್ಷದೊಳಗಿನ ಮಕ್ಕಳನ್ನು ಬಾಧಿಸುವ ಸಾಧ್ಯತೆ ಹೆಚ್ಚಿರುತ್ತದೆ. ಕಲುಷಿತ ನೀರು ಮತ್ತು ಆಹಾರದ ಮೂಲಕ ಹರಡುವ ಈ ಕಾಯಿಲೆಯಿಂದ ಮಕ್ಕಳಲ್ಲಿ ಶಾಶ್ವತ ಅಂಗವೈಕಲ್ಯ ಉಂಟಾಗುವ ಅಪಾಯವಿದ್ದು, ಲಸಿಕಾ ಕರಣವೇ ಇದನ್ನು ತಡೆಗಟ್ಟುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ ಎಂದರು. ಸಭೆಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.