ಚನ್ನರಾಯಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 2026-27 ನೇ ಸಾಲಿನ ಪ್ರಥಮ ಪಾಲಕರ ಸಭೆಯಲ್ಲಿ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿದರು. ಎಚ್.ಎಚ್.ಸತೀಶ್, ಕೆ.ಎನ್.ಅನಿಲ್, ದೇವರಾಜೇಗೌಡ, ವಳಗೆರಹಳ್ಳಿ ಮಂಜುನಾಥ್ ಇದ್ದರು. 
ಹಾಸನ

ಸರ್ಕಾರಿ ಶಾಲೆಗಳಲ್ಲಿ ಕಡ್ಡಾಯವಾಗಿ ಪಾಲಕರ ಸಭೆ ಮಾಡಿ

ಚನ್ನರಾಯಪಟ್ಟಣ: ತಾಲೂಕಿನ ಸರ್ಕಾರಿ ಶಾಲೆಗಳು ಪ್ರತಿವರ್ಷವೂ ಉತ್ತಮ ಫಲಿತಾಂಶ ದಾಖಲಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ 2026-27ನೇ ಸಾಲಿನ ಪ್ರಥಮ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ ತಂತ್ರಜ್ಞಾನ ಆಧಾರಿತ ಕಲಿಕೆಗೆ ಉತ್ತೇಜನ ನೀಡಲು ಸುಸಜ್ಜಿತ ಪ್ರಯೋಗಾಲಯ ನಿರ್ಮಾಣ ಮಾಡಬೇಕು. ವಿಜ್ಞಾನ ಮತ್ತು ಕಂಪ್ಯೂಟರ್ ಶಿಕ್ಷಣಕ್ಕೆ ಆದ್ಯತೆ ನೀಡಿ, ಉತ್ತಮ ವಾತಾವರಣದಲ್ಲಿ ಶುದ್ಧ ಕುಡಿಯುವ ನೀರು ಮತ್ತು ಶೌಚಗೃಹಗಳ ವ್ಯವಸ್ಥೆ, ತರಬೇತಿ ಹೊಂದಿದ ಶಿಕ್ಷಕರಿಂದ ನಿರಂತರ ಆಧುನಿಕ ತರಬೇತಿ ಸೇರಿದಂತೆ ಮೂಲಸೌಕರ್ಯಕ್ಕೆ ಅಗತ್ಯ ಕಮ ಕೈಗೊಳ್ಳಲಾಗಿದೆ. ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿರುವುದು ಹೆಮ್ಮೆಯ ವಿಷಯ. ತಾಲೂಕಿನ ಶೈಕ್ಷಣಿಕ ಸಾಧನೆಗೆ ಹಿರಿಮೆಯ ಗರಿಯಾಗಿದೆ. ಉತ್ತಮ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಅಭಿನಂದನೆಗಳು ಎಂದರು.
ಸರ್ಕಾರಿ ಶಾಲೆಗಳು ಉತ್ತಮವಾಗಿ ಬೆಳೆಯಬೇಕಾದರೆ ಪಾಲಕರು ಮತ್ತು ಶಾಲಾ ಶಿಕ್ಷಕರು ಸಮಾನವಾಗಿ ಸ್ಪಂದಿಸಿದಾಗ ಮಾತ್ರ ಉಳಿಯಲು ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ಸಾಮಾಜಿಕ ಮೌಲ್ಯಗಳನ್ನು ಕಲಿಯಲು ಸಹಕಾರಿಯಾಗುತ್ತದೆ. ಶಾಲೆಯಲ್ಲಿ ನಡೆಯುವ ಪಾಠದ ಜತೆಗೆ ಮನೆಯಲ್ಲಿಯೂ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಗಮನಹರಿಸಿದಾಗ ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ ಎಂಬಂತೆ ಸರಿಸಮಾನವಾಗಿ ಕಲಿಕೆಯಲ್ಲಿ ಮುಂದುವರಿದು ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಸಹಕಾರಿಯಾಗುತ್ತದೆ. ಶಾಲೆಯಲ್ಲಿ ಪಾಲಕರ ಸಭೆ ಅತ್ಯಂತ ಅವಶ್ಯಕ. ತಾಲೂಕಿನದಂತೆ ಇರುವ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಕಡ್ಡಾಯವಾಗಿ ಎರಡು ತಿಂಗಳಿಗೊಮ್ಮೆ ಪಾಲಕರ ಸಭೆ ಮಾಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಚ್.ಸತೀಶ್, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಕೆ.ಎನ್.ಅನಿಲ್, ಪೇಟೆ ಪ್ರೌಢಶಾಲೆಯ ಮುಖ್ಯಶಿಕ್ಷಕಿ ನೇತ್ರಾವತಿ, ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ದೇವರಾಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ವಳಗೆರಹಳ್ಳಿ ಮಂಜುನಾಥ್, ಶಾಲಾ ಶಿಕ್ಷಕ ವೃಂದ ಸೇರಿದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.