ಪುರಾಣ ಪ್ರಸಿದ್ಧ ಮಾದಲಗೆರೆ ಶ್ರೀ ಮಹದೇಶ್ವರ ಸ್ವಾಮಿ 
ಹಾಸನ

ನಾಳೆ ಮಹದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ

ಪ್ರಮುಖ ಮುಖ್ಯಾಂಶಗಳು

  • 9 ದಿನ ಮೇಳೈಸಲಿದೆ ಧಾರ್ಮಿಕ ವೈಭವ
  • ಬುಡಕಟ್ಟು ಗ್ರಾಮಗಳ ನೇತೃತ್ವದಲ್ಲಿ ಪೂಜಾ ಕಾರ್ಯ
ಹಿರೀಸಾವೆ: ಹೋಬಳಿಯ ಪುರಾಣ ಪ್ರಸಿದ್ಧ ಮಾದಲಗೆರೆ ಶ್ರೀ ಮಹದೇಶ್ವರ ಸ್ವಾಮಿಯ 9ನೇ ವರ್ಷದ ಜಾತ್ರಾ ಮಹೋತ್ಸವ ಫೆ.15ರಿಂದ ಫೆ.23ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.
ಮಾದಲಗೆರೆ ಶ್ರೀ ಮಹದೇಶ್ವರ ಸ್ವಾಮಿ ದೇಗುಲವು ನಿಂಬೇಹಳ್ಳಿ, ಮಹದೇಶ್ವರ ಬಡಾವಣೆ, ಎಂ.ಕೆ.ಚಿಕ್ಕೆನಹಳ್ಳಿ, ಎಂ.ಕೆ.ಹೊಸೂರು, ಎಂ.ಕೆ.ರಂಗನಾಥಪುರ ಹಾಗೂ ಎಂ.ಕೆ.ಲಕ್ಷ್ಮೀಪುರ ಸೇರಿದಂತೆ ಏಳು ಬುಡಕಟ್ಟು ಗ್ರಾಮಗಳಿಗೆ ಒಳಪಡಲಿದೆ.
ಫೆ.15ರಂದು ಮುಂಜಾನೆ ದೇಗುಲಕ್ಕೆ ಬುಡಕಟ್ಟು ಗ್ರಾಮಸ್ಥರು ಹಸಿರು ಚಪ್ಪರ ಹಾಕಲಿದ್ದು, ತಳಿರು ತೋರಣಗಳಿಂದ ಸಿಂಗರಿಸಲಿದ್ದಾರೆ. ವಿದ್ಯುತ್ ದೀಪಾಲಂಕಾರದೊಂದಿಗೆ ಉತ್ಸವದ ಬೀದಿಯನ್ನು ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಲಾಗುವುದು.
ಶ್ರೀ ಮಹದೇಶ್ವರಸ್ವಾಮಿ, ಶ್ರೀ ಶಂಭುಲಿಂಗೇಶ್ವರಸ್ವಾಮಿ ಹಾಗೂ ಶ್ರೀ ಸೋಮೇಶ್ವರಸ್ವಾಮಿ ದೇಗುಲಗಳಲ್ಲಿ ಪಂಚಾಮೃತ ಅಭಿಷೇಕ, ಜಾಗರಣೆ, ಮಹಾಶಿವರಾತ್ರಿ ವಿಶೇಷ ಪೂಜೆಗಳು ನೆರವೇರಲಿವೆ. ಮಹದೇಶ್ವರ ಬಡಾವಣೆಯ ಜಯಮ್ಮ ಕುಟುಂಬಸ್ಥರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.
ಫೆ.16ರಂದು ಸಂಜೆ ಮಂಗಳವಾದ್ಯ ವೈಭವದೊಂದಿಗೆ ಮೂಲಸ್ಥಾನದ ಸನ್ನಿಧಿಗೆ ಶ್ರೀ ಸ್ವಾಮಿಯವರ ಆಗಮನ, ಗಂಗಾ ಪೂಜೆ, ಧ್ವಜಾರೋಹಣ, ಗಣಪತಿ ಪೂಜೆ, ಪಂಚಾಮೃತ ಅಭಿಷೇಕ ಹಾಗೂ ಮಾದಲಗೆರೆ ವಸಂತಮ್ಮ ದೇವರಾಜು ಅವರಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
17ರಂದು ವಿಶೇಷ ಪೂಜೆ, ಫೆ.18ರಂದು ಪೂಜಾ ಕೈಂಕರ್ಯಗಳ ಜತೆಗೆ ಮಹದೇಶ್ವರ ಸ್ವಾಮಿಯ ಹುಲಿವಾಹನ ಸೇವೆ ಜರುಗಲಿದ್ದು, ಸಂಜೆ 5 ಗಂಟೆಗೆ ಕುಂಬೇನಹಳ್ಳಿ ಕಪನಿಗೌಡರ ಸಾರಥ್ಯದಲ್ಲಿ ಕೋಲಾಟ ಕಾರ್ಯಕ್ರಮ ನಡೆಯಲಿದೆ.
19ರಂದು ಬೆಳಗ್ಗೆ ಗಂಗಾ ಪೂಜೆ, ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗದ ನಂತರ ಹುಲಿವಾಹನ ಸೇವೆ ಜರುಗಲಿದ್ದು, ರಾತ್ರಿ 8.30 ಗಂಟೆಗೆ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸಲಾಗಿದೆ.
20ರಂದು ಎಂದಿನಂತೆ ವಿಶೇಷ ಪೂಜೆ ವಿಧಿ ವಿಧಾನಗಳು, ಹುಲಿವಾಹನ ಸೇವೆ ಹಾಗೂ ಅನ್ನದಾಸೋಹ ನಡೆಯಲಿದೆ. ಫೆ.21ರಂದು ರಾತ್ರಿ 8.30 ಗಂಟೆಗೆ ಸಂಗೀತ ರಸ ಸಂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
22ರಂದು ವಿಶೇಷ ಪೂಜೆಯೊಂದಿಗೆ ಮಹದೇಶ್ವರ ಬಡಾವಣೆಯ ಗ್ರಾಮಸ್ಥರಿಂದ ಮದ್ದುಗುಂಡು ಚಕಮಕಿ, ವೀರಭದ್ರನ ಕುಣಿತ, ವಾದ್ಯ ವೈಭವಗಳೊಂದಿಗೆ ದೇವರ ಉತ್ಸವ ನಡೆಯಲಿದೆ.
ಭಾನುವಾರ ಸಂಜೆ ಮಾದಲಗೆರೆ ಬಸವ ಗೆಳೆಯರ ಬಳಗದ ವತಿಯಿಂದ ಶ್ವಾನ ಓಟದ ಸ್ಪರ್ಧೆ ಆಯೋಜಿಸಿದ್ದು, 8 ಬಹುಮಾನಗಳ ಜತೆಗೆ ವಿಜೇತ ಶ್ವಾನಗಳಿಗೆ ಆಕರ್ಷಕ ಟ್ರೋಫಿ ವಿತರಿಸಲಾಗುವುದು. ಚನ್ನರಾಯಪಟ್ಟಣದ ಸ್ವಯಂ ಪ್ರೇರಿತ ರಕ್ತ ಕೇಂದ್ರ, ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆ ಹಾಗೂ ನ್ಯೂ ಸ್ಪರ್ಶ ಲೈಫ್ ಲೈನ್ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣೆ ಮತ್ತು ಬೃಹತ್ ರಕ್ತದಾನ ಶಿಬಿರ ಹಾಗೂ ಕಣ್ಣಿನ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಮಧುಮೇಹ, ರಕ್ತದೊತ್ತಡ, ದೃಷ್ಟಿದೋಷ, ಹೃದಯ ಸಂಬಂಧಿ ಸಮಸ್ಯೆಗಳು ಹಾಗೂ ಇತರ ಕಾಯಿಲೆಗಳಿಗೆ ವೈದ್ಯಕೀಯ ಪರೀಕ್ಷೆ ನಡೆಯಲಿದೆ.
ಫೆ.23ರಂದು ವಿವಿಧ ವಿಶೇಷ ಪೂಜೆ ಕೈಂಕರ್ಯಗಳು ನೆರವೇರಲಿದ್ದು, ಶ್ರೀ ಮಹದೇಶ್ವರ ಸ್ವಾಮಿಯವರ ಹುಲಿವಾಹನ ಸೇವೆ ನಡೆಯಲಿದೆ. ಸಂಜೆ 7 ಗಂಟೆಗೆ ನಿಂಬೇಹಳ್ಳಿ ಗ್ರಾಮಕ್ಕೆ ಶ್ರೀ ಸ್ವಾಮಿಯವರ ಪ್ರವೇಶದೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಸುತ್ತಮುತ್ತಲ ಗ್ರಾಮಸ್ಥರು ಸ್ವಾಮಿಯ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ