ಹೊಳೆನರಸೀಪುರ ಪಟ್ಟಣದಲ್ಲಿ ಮಡಿವಾಳ ಸಮಾಜದ ವತಿಯಿಂದ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು. ಮನೋಹರ, ಪುಟ್ಟರಾಜು, ನಂಜುಂಡಿ, ಸುನೀಲ್ ಕುಮಾರ್ ಇತರರು ಇದ್ದರು.
ಹೊಳೆನರಸೀಪುರ : ನಾಡು ಕಂಡ ಅಪ್ರತಿಮ ಶ್ರೇಷ್ಠ ಭಕ್ತಿ ನಿಷ್ಠೆಯ ವಚನಕಾರ ಮಡಿವಾಳ ಮಾಚಿದೇವ ಎಂದು ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಮನೋಹರ್ ಬಣ್ಣಿಸಿದರು.
ಪಟ್ಟಣದ ಮಡಿವಾಳರ ಬೀದಿಯಲ್ಲಿರುವ ರಾಮಮಂದಿರದಲ್ಲಿ ಭಾನುವಾರ ಮಡಿವಾಳ ಸಮಾಜದ ವತಿಯಿಂದ ಆಯೋಜಿಸಿದ್ದ ಶ್ರೀ ಮಡಿವಾಳ ಮಾಚಿದೇವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಡಿವಾಳ ಮಾಚಿದೇವ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಮಾಚಿದೇವ ಅವರು 12ನೆಯ ಶತಮಾನದಲ್ಲಿಯೇ ದುರ್ಬಲರು, ಶೋಷಣೆ, ಜಾತೀಯತೆ, ಮೇಲು ಕೀಳು, ತಾರತಮ್ಯ, ಅಸ್ಪೃಶ್ಯತೆ, ಮೂಡ ನಂಬಿಕೆಗಳ ವಿರುದ್ಧ ಅವಿರತವಾಗಿ ಶ್ರಮಿಸಿದ ಅಪ್ರತಿಮ ಎಂದರು.
ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಶಿಕ್ಷಣದಿಂದ ವಂಚಿತರಾದವರಿಗೆ ಅವಕಾಶ ಕಲ್ಪಿಸಿದ ಮಹಾಪುರುಷ. ತಮ್ಮ ವಚನಗಳ ಮೂಲಕ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿದ ಮಹಾಪುರುಷರಲ್ಲಿ ಇವರೂ ಒಬ್ಬರು ಎಂದು ಹೇಳಿದರು.
ಮಡಿವಾಳ ಮಾಚಿದೇವ ಅವರು ಸುಮಾರು 354 ವಚನಗಳನ್ನು ರಚಿಸಿದ್ದಾರೆ. ತಮ್ಮ ವಚನಗಳ ಮೂಲಕವೇ ಸಮಾಜವನ್ನು ಜಾಗೃತಿಗೊಳಿಸುವ ಕಾಯಕ ಮಾಡುತ್ತಿದ್ದರು. ಮಡಿವಾಳ ಸಮಾಜದ ಮೂಲ ಪುರುಷ, ಕಲ್ಯಾಣ ಕ್ರಾಂತಿ ಪುರುಷ, ಮದದ ಮೈಲಿಗೆ ಕಳೆದ ಸರ್ವಶ್ರೇಷ್ಠ ಶರಣ ಮಡಿವಾಳ ಮಾಚಿದೇವ ಎಂದು ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಡಿವಾಳ ಸಂಘದ ಉಪಾಧ್ಯಕ್ಷರಾದ ಪುಟ್ಟರಾಜು, ನಂಜುಂಡಿ, ಕಾರ್ಯದರ್ಶಿ ಸುಜಯ್ ಕುಮಾರ್, ಖಜಾಂಚಿ ಅನಿಲ್ ಕುಮಾರ್, ನಿವೃತ್ತ ಅಮೀನರಾದ ಯೋಗ ನರಸಿಂಹ, ಇಂದೂಧರ ಮತ್ತಿತರರಿದ್ದರು.