-ಹಾಸನ ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಂ.ಸಿ.ಸತ್ಯನಾರಾಯಣ ಅವರ ಮನೆಯ ಎದುರು ಕಾದು ನಿಂತಿರುವ ಲೋಕಾಯುಕ್ತ ಅಧಿಕಾರಿಗಳು.
- ಮಹಾನಗರ ಪಾಲಿಕೆ ಎಇಇ ನಿವಾಸದ ಮೇಲೆ ಲೋಕಾ ದಾಳಿ
- ಬಾಗಿಲು ತೆರೆಯದೆ ಸತತ ನಾಲ್ಕು ಗಂಟೆ ಸತಾಯಿಸಿದ ಅಧಿಕಾರಿ
ಹಾಸನ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದಡಿ ಹಾಸನ ಮಹಾನಗರ ಪಾಲಿಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್(ಎಇಇ) ಎಂ.ಸಿ. ಸತ್ಯನಾರಾಯಣ ಅವರ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಗ್ಗೆ ದಾಳಿ ನಡೆಸಿದರು.
ನಗರದ ರಕ್ಷಣಾಪುರಂನಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ಡಿವೈಎಸ್‌ಪಿ ಸುರೇಶ್ ಕುಮಾರ್, ಇನ್‌ಸ್ಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ 15 ಜನರ ತಂಡ ಬೆಳಗ್ಗೆ 5.15ಕ್ಕೆ ದಾಳಿ ನಡೆಸಿತು. ಲೋಕಾ ಅಧಿಕಾರಿಗಳು ಬಂದು ಗಂಟೆಗಟ್ಟಲೆ ಮನೆ ಮುಂದೆ ಕಾದು ನಿಂತರೂ ಸತ್ಯನಾರಾಯಣ ಅವರು ಮನೆಯೊಳಗೆ ಇದ್ದರೂ ಬಾಗಿಲು ತೆರೆಯದೆ ಸತಾಯಿಸಿದರು. ಇದರಿಂದಾಗಿ ಬೇರೆ ದಾರಿ ಇಲ್ಲದೆ ಲೋಕಾಯುಕ್ತ ಅಧಿಕಾರಿಗಳು ಕಾಯಬೇಕಾಯಿತು.
ಲೋಕಾಯುಕ್ತ ಅಧಿಕಾರಿಗಳು ಬಂದಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಮನೆಯ ಲೈಟ್ ಆಫ್ ಮಾಡಿ, ಯಾವುದೇ ಬಾಗಿಲು ತೆರೆಯದೆ ಅಧಿಕಾರಿಗಳನ್ನು ಸತಾಯಿಸಿದರು. ಬರೋಬ್ಬರಿ 4 ಗಂಟೆಗಳ ಕಾಲ ಬಾಗಿಲು ತೆರೆಯಲಿಲ್ಲ. ಇತ್ತ ಲೋಕಾಯುಕ್ತ ಅಧಿಕಾರಿಗಳು ಬಾಗಿಲು ತೆರೆಸಲು ಹರಸಾಹಸಪಟ್ಟರು.
ಅಧಿಕಾರಿಗಳು ಕಟ್ಟಡ ಹತ್ತಿ ಕಿಟಕಿ ಬಡಿದು ಕೂಗಿದರೂ ಬಾಗಿಲು ತೆರೆಯಲಿಲ್ಲ. ತಮ್ಮ ಫೋನ್ ಸ್ವಿಚ್‌ಆಫ್ ಮಾಡಿಕೊಂಡಿದ್ದರು. ಮನೆಯ ಸುತ್ತ ಓಡಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬೇರೆ ದಾರಿ ಇಲ್ಲದೆ ಲೋಕಾ ತಂಡ ಅಧಿಕಾರಿ ಮನೆಯ ಬಳಿಯೇ ಬೀಡುಬಿಟ್ಟಿತು.
ಎಸ್ಪಿ ನಂದಿನಿ ಭೇಟಿ: ಅಧಿಕಾರಿ ಮೊಂಡಾಟ ತಿಳಿದು ಸ್ಥಳಕ್ಕೆ ಲೋಕಾಯುಕ್ತ ಎಸ್ಪಿ ಬಿ.ಎನ್.ನಂದಿನಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು. ಅಧಿಕಾರಿಗಳಿಂದ ಮಾಹಿತಿ ಪಡೆದು ಅಲ್ಲಿಂದ ತೆರಳಿದರು. ಎಇಇ ಹಠ ಲೋಕಾ ಅಧಿಕಾರಿಗಳಿಗೆ ತಲೆನೋವಾಯಿತು. ಬಾಗಿಲು ತೆರೆಯುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಲವು ಬಾರಿ ಸೂಚನೆ ನೀಡಿದರೂ ಮನೆಯ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕಡೆಗೆ ಕೆಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮನೆಯ ಛಾವಣಿ ಏರಿ ಒಳಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಇದರಿಂದ ರೋಸಿಹೋದ ಅಧಿಕಾರಿಗಳು ಈ ಅಧಿಕಾರಿ ಮೇಲೆ ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬಹುದು ಎಂದು ಚರ್ಚೆಗೆ ಮುಂದಾದರು.
ಸತತ ನಾಲ್ಕು ಗಂಟೆ ನಂತರ ಎಂ.ಸಿ.ಸತ್ಯನಾರಾಯಣ ಮನೆಯ ಬಾಗಿಲು ತೆರೆದರು. ನಂತರ ಮನೆಯೊಳಗೆ ತೆರಳಿದ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಆರಂಭಿಸಿದರು. ನಗ-ನಾಣ್ಯ ಇತ್ಯಾದಿ ವಸ್ತುಗಳ ಪರಿಶೀಲನೆ ಮುಂದುವರಿದಿದೆ. ಮನೆಗೆ ತಿಂಡಿ ತರಿಸಿಕೊಂಡು ಸೇವಿಸಿ ಲೋಕಾ ತಂಡ ಪರಿಶೀಲೆ ಮುಂದುವರಿಸಿದರು. ನಂತರ ಸತ್ಯನಾರಾಯಣ ಅವರ ಪತ್ನಿ ಪಾಲುದಾರರಾಗಿರುವ ಕಾಂಗ್ರೆಸ್ ಮುಖಂಡ ಜೆಸಿಬಿ ಚಂದ್ರಶೇಖರ್ ಒಡೆತನದ ಶಾಲೆಯ ಮೇಲೂ ಲೋಕಾ ತಂಡ ದಾಳಿ ನಡೆಸಿತು.
ಹಾಸನ ಮಹಾನಗರಪಾಲಿಕೆಯ ಸತ್ಯನಾರಾಯಣ ಅವರ ಕಚೇರಿ ಮೇಲೂ ದಾಳಿ ನಡೆಸಿ ಪರಿಶೀಲಿಸಿದರು. ಕಚೇರಿ ಡ್ರಾಯರ್‌ಗಳ ಕೀ ಅಧಿಕಾರಿ ಬಳಿಯೇ ಇದ್ದುದ್ದರಿಂದ, ಮನೆಗೆ ಸಿಬ್ಬಂದಿ ಕಳಿಸಿ ಕೀ ತರಿಸಿಕೊಂಡು ಪರಿಶೀಲಿಸಿದರು. 2008ರಿಂದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದಲ್ಲೇ ಕಾರ್ಯನಿರ್ವಹಿಸುತ್ತಿರುವ ಸತ್ಯನಾರಾಯಣ ನಾಲ್ಕು ತಿಂಗಳ ಹಿಂದಷ್ಟೇ ಪಾಲಿಕೆಗೆ ಎಇಇ ಆಗಿದ್ದರು. 2022ಕ್ಕೆ ಎಇ ಯಿಂದ ಎಇಇ ಆಗಿ ಬಡ್ತಿ ಹೊಂದಿದ್ದರು.
ಆದರೆ, ಜೂನಿಯರ್ ಇಂಜಿನಿಯರ್‌ನಿಂದ, ಸಹಾಯಕ ಇಂಜಿನಿಯರ್ ಆಗಿ ಬಡ್ತಿ ಹೊಂದಿದ್ದಕ್ಕೆ ಯಾವುದೇ ದಾಖಲೆ ಇಲ್ಲ ಎನ್ನಲಾಗಿದೆ. ಬಡ್ತಿ ನೀಡುವಾಗ ಡಿಪಿಸಿ (ಡಿಪಾರ್ಟ್‌ಮೆಂಟಲ್ ಪ್ರಮೋಷನ್ ಕಮಿಟಿ) ರಚನೆ ಮಾಡಿ ಅಲ್ಲಿ ಪಾಸಾಗಬೇಕು ಎಂಬ ನಿಯಮ ಇದೆ. ಆದರೆ, ಸತ್ಯನಾರಾಯಣ ಈ ನಿಯಮ ಪಾಲನೆ ಮಾಡದೆ ಕೇವಲ ಪ್ರಾಧಿಕಾರದ ಸಭೆಯಲ್ಲಿ ಪ್ರಮೋಷನ್ ಕೊಡಲು ತೀರ್ಮಾನ ಮಾಡಿದಂತೆ ದಾಖಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.