ಅರಸೀಕೆರೆ ಗ್ರಾಮಾಂತರ ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಶ್ರೀ ಮೂಲ ಸ್ವರ್ಣ ಗೌರಮ್ಮ ದೇವಾಲಯದಲ್ಲಿ ಎರಡನೇ ವರ್ಷದ 11 ಸಹಸ್ರ ದೀಪೋತ್ಸವ ಇತ್ತೀಚೆಗೆ ಸಂಭ್ರಮದಿಂದ ಜರುಗಿತು.
ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಣಕಟ್ಟೆ ಹೋಬಳಿಯ ಮಾಡಾಳು ಗ್ರಾಮದ ಶ್ರೀ ಮೂಲ ಸ್ವರ್ಣ ಗೌರಮ್ಮ ದೇವಾಲಯದಲ್ಲಿ ಎರಡನೇ ವರ್ಷದ 11 ಸಹಸ್ರ ದೀಪೋತ್ಸವ ಇತ್ತೀಚೆಗೆ ಸಂಭ್ರಮದಿಂದ ಜರುಗಿತು.
ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ದೀಪೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಧರ್ಮದಿಂದಲೇ ಮನುಕುಲಕ್ಕೆ ಶಾಂತಿ. ಜ್ಯೋತಿ ಬೌದ್ಧಿಕ ಕತ್ತಲೆಯನ್ನು ಕಳೆಯುವ ವಸ್ತುವಲ್ಲ. ಬದಲಾಗಿ ತ್ರಿಮಂಗಳನ್ನು ನಿವಾರಿಸಿ ಜ್ಞಾನವನ್ನು ವೃದ್ಧಿಸುವ ಶಕ್ತಿಯನ್ನು ಹೊಂದಿದೆ. ನಿಮ್ಮ ಎಲ್ಲ ಪೂರ್ವಜರು ಜ್ಯೋತಿಗೆ ದೈವತ್ವವದ ಸ್ವರೂಪ ನೀಡಿದ್ದಾರೆ. ಈ ನಿಟ್ಟಿನಲ್ಲಿ ಮಾಡಾಳು ಕ್ಷೇತ್ರದಲ್ಲಿ ಹಾರನಹಳ್ಳಿ ಕೋಡಿಮಠದಿಂದ ದೀಪೋತ್ಸವ ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಅಧುನಿಕತೆಯಿಂದಾಗಿ ಮನುಷ್ಯ ಸಂಸ್ಕೃತಿ ಮತ್ತು ಸಂಸ್ಕಾರ ಮರೆಯಬಾರದು. ಮಠ, ಮಂದಿರಗಳ ಮತ್ತು ಗುರುಗಳ ಮಾರ್ಗದರ್ಶನ ಹಾಗೂ ಭಗವಂತನ ಅಶೀರ್ವಾದದಿಂದ ಏನಾದರು ಸಾಧಿಸಬಹುದು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ. ಆದ್ದರಿಂದ ದೇವಾಲಯಗಳು ಮತ್ತು ಮಠಗಳಿಂದ ಶಾಂತಿ ನೆಮ್ಮದಿ ತರುವ ಕೇಂದ್ರಗಳಾಗಿವೆ ಎಂದರು.
ಗ್ರಾಮದ ದೈವ ಶ್ರೀ ಚನ್ನಬಸವೇಶ್ವರ ಸ್ವಾಮಿಗೆ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಪಿ.ಹೊಸಹಳ್ಳಿ, ಯಚಗೊಂಡನಹಳ್ಳಿ, ಕಿತ್ತನಕೆರೆ, ದೋಣನಕಟ್ಟೆ, ಬೊಮ್ಮಸಮುದ್ರ, ಕಡಲಮಗೆ, ಕೆ.ಶಂಕರನಹಳ್ಳಿ, ಹೇರೆಹಳ್ಳಿ, ಸೀತಾಪುರಕೊಪ್ಪಲು, ಮಯಾದವರ ಹಟ್ಟಿ ದೊಡ್ಡಮೇಟಿಕುರ್ಕೆ, ಶಶಿವಾಳದ ಗ್ರಾಮಸ್ಥರು ದೀಪೋತ್ಸವದಲ್ಲಿ ಪಾಲ್ಗೊಂಡಿದ್ದರು.