ಹಾಸನದ ಮಹಾರಾಜ ಪಾರ್ಕ್ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ರಾಜೇಶ್ವರಿ ಹುಲ್ಲೇನಹಳ್ಳಿ, ಜಯಂತಿ ಚಂದ್ರಶೇಖರ್, ಶೈಲಜಾ ಹಾಸನ್, ಭಾರತಿ ಹಾದಿಗೆ, ಬಿ.ಟಿ.ರತ್ನಮ್ಮ , ಯಮುನಾ, ಕೆ.ಸಿ.ಗೀತಾ ಇತರರಿದ್ದರು.
- ಬದುಕಿನ ಅನುಭವವೇ ಭಾವನಾತ್ಮಕ ಬರವಣಿಗೆಗೆ ಪ್ರೇರಣೆ
- ಲೇಖಕಿ ಜಯಂತಿ ಚಂದ್ರಶೇಖರ್ ಹೇಳಿಕೆ
ಹಾಸನ: ಸಾಹಿತ್ಯ ಕ್ಷೇತ್ರದಲ್ಲಿ ಭಾವನಾತ್ಮಕ ಬರವಣಿಗೆಗೆ ಬದುಕಿನ ಅನುಭವಗಳೇ ಮೂಲಾಧಾರವಾಗಿದ್ದು, ಪ್ರತಿ ಬರಹಗಾರ ಅಥವಾ ಬರಹಗಾರ್ತಿಯ ಜೀವನವೇ ಅವರ ಕೃತಿಗಳಿಗೆ ಪ್ರಮುಖ ಸರಕನ್ನು ಒದಗಿಸುತ್ತದೆ ಎಂದು ಲೇಖಕಿ ಜಯಂತಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ನಗರದ ಮಹಾರಾಜ ಪಾರ್ಕ್ ಆವರಣದಲ್ಲಿ ಜಿಲ್ಲಾ ಲೇಖಕಿಯರ ಬಳಗ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜೂನ್ ತಿಂಗಳ ಸಾಹಿತ್ಯದ ನಡಿಗೆ ಸಮುದಾಯದೆಡೆಗೆ ತಿಂಗಳ ತಿರುಳು ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮಾನ್ಯ ವ್ಯಕ್ತಿಯಾಗಲೀ, ಅಸಾಮಾನ್ಯ ವ್ಯಕ್ತಿಯಾಗಲಿ ಪ್ರತಿಯೊಬ್ಬರ ಜೀವನವೂ ಒಂದು ಮಹಾಕಾವ್ಯ ಅಥವಾ ಕಾದಂಬರಿಯಂತೆಯೇ ಇರುತ್ತದೆ. ಜೀವನದಲ್ಲಿ ನಡೆಯುವ ಸಣ್ಣ-ಪುಟ್ಟ ಘಟನೆಗಳನ್ನು ಸಾಹಿತ್ಯ ರೂಪಕ್ಕೆ ತಂದಾಗ ಅದು ಸಮಾಜದಲ್ಲಿ ಉತ್ತಮ ಸಂಸ್ಕಾರ, ಕುಟುಂಬ ಮೌಲ್ಯಗಳು, ಸರಳತೆ ಮತ್ತು ಮಾನವೀಯತೆಯನ್ನು ಬೆಳೆಸುವ ಶಕ್ತಿಯನ್ನು ಹೊಂದಿರುತ್ತದೆ ಎಂದರು.
ಲೇಖಕಿ ಶೈಲಜಾ ಹಾಸನ್ ಮಾತನಾಡಿ, ಆತ್ಮಕಥೆ ಬರೆಯಲು ಸಾಧ್ಯವಾಗದಿದ್ದರೂ ಪ್ರತಿಯೊಬ್ಬರ ಬದುಕಿನ ವಿಶಿಷ್ಟ ಘಟನೆಗಳನ್ನು ಲೇಖನ ರೂಪದಲ್ಲಿ ದಾಖಲಿಸಿ ಹಾಸನ ಜಿಲ್ಲಾ ಲೇಖಕಿಯರ ಬಳಗದ ಮೂಲಕ ಸಂಕಲನ ರೂಪದಲ್ಲಿ ಪುಸ್ತಕ ಪ್ರಕಟಿಸಬಹುದೆಂಬ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ, ಭಾರತಿ ಹಾದಿಗೆ, ಬಿ.ಟಿ.ರತ್ನಮ್ಮ , ಯಮುನಾ, ಕೆ.ಸಿ.ಗೀತಾ, ಗಿರಿಜಾಂಬಾ, ಕಲ್ಪನಾ, ಮಂಜುಳಾ ಕುಮಾರಸ್ವಾಮಿ ಇತರರಿದ್ದರು. ಗಿರಿಜಾಂಬಾ, ಕಲ್ಪನಾ ಇತರರಿದ್ದರು.